
ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯು.ಟಿ. ಸಹೋದರರು
ಉಳ್ಳಾಲ: ಪವಿತ್ರ ಹಜ್ ಯಾತ್ರೆ ಮುಗಿಸಿ ಮರಳಿದ ಸ್ಪೀಕರ್ ಯು.ಟಿ. ಖಾದರ್ ಮತ್ತು ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ. ಇಫ್ತಿಕರ್ ಅಲಿ ಅವರು ಮಂಗಳವಾರ ಸಂಜೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಉಳ್ಳಾಲ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು, ಮಂಗಳೂರು ವಿದಾನಸಭಾ ಕ್ಷೇತ್ರದ ನಾಗರಿಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಯು.ಟಿ. ಖಾದರ್ ಮತ್ತು ಅವರ ಸಹೋದರ ಇಫ್ತಿಕರ್ ಅಲಿಯವರನ್ನು ಸ್ವಾಗತಿಸಿ ಬರಮಾಡಿಕೊಂಡರು.
ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಯು.ಟಿ. ಖಾದರ್ ಅವರು ಜೀವನದಲ್ಲಿ ಯಾವುದೂ ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆಯೊಲ್ಲ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದದಿಂದ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುವಂತಾಯಿತು. ಖಲೀಲ್ ತಂಙಳ್ ಅವರ ಮಾರ್ಗದರ್ಶನದಲ್ಲಿ ಯಾತ್ರೆಯು ಸುಸೂತ್ರವಾಗಿ ನಡೆಯಿತು. ಉಳ್ಳಾಲ ದರ್ಗಾದಲ್ಲಿ ನನ್ನ ಹೆತ್ತವರ ಸಮಾಧಿಯೂ ಇದ್ದು, ಇದು ನನ್ನ ಅಚ್ಚು ಮೆಚ್ಚಿನ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಹಜ್‌ನಿಂದ ಮರಳಿ ಮನೆಗೆ ತೆರಳುವ ಮುನ್ನ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೇನೆ. ನಾನು ಮದುವೆಯಾದ ದಿನದಂದೂ ಮನೆಗೆ ತೆರಳುವ ಮೊದಲು ನೇರವಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆನೆಂದು ಗತಿಸಿದ ದಿನಗಳನ್ನ ನೆನಪಿಸಿಕೊಂಡರು.
ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಣಚೂರು ಸಮೂಹ ಸಂಸ್ಥೆಯ ಚೇರ್ಮನ್ ಕಣಚೂರು ಮೋನು, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ಎನ್.ಎಸ್. ಕರೀಂ, ಮಹಮ್ಮದ್ ಮುಸ್ತಾಫ ಹರೇಕಳ, ಝಕಾರಿಯ ಮಲಾರ್, ಪುರುಷೋತ್ತಮ ಶೆಟ್ಟಿ ಪಿಲಾರು, ಜಬ್ಬಾರ್ ಬೋಳಿಯಾರ್, ಉಸ್ಮಾನ್ ಕಲ್ಲಾಪು, ಸಿರಾಜ್ ಕಿನ್ಯ, ನಝರ್ ಷಾ ಪಟ್ಟೋರಿ, ಮನ್ಸೂರ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.