
ಕ್ರೈಮ್ ಸಹಿತ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಕಾಲಿಕ ಸ್ಪಂದನ ಅಗತ್ಯ: ಶಿರ್ವ ಠಾಣಾಧಿಕಾರಿ ಮಂಜುನಾಥ್
ಶಿರ್ವ: ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಬಗ್ಗೆ ಗಮನ ಹರಿಸಬೇಕಾಗಿದೆ. 18 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಮಾದಕ ದ್ರವ್ಯ ಸೇವನೆ ಸಹಿತ ವಿವಿಧ ಅಪರಾಧ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯ ಇದೆ. ತನಗೂ ಇನ್ನೊಬ್ಬರಿಗೂ ಅನುಕೂಲವಾಗುವಂತಹ ಶಿಕ್ಷಣ ಮನೆಯಿಂದಲೇ ಆಗಬೇಕು. ಸೈಬರ್ ಕ್ರೈಮ್, ಮೊಬೈಲ್ ಮೂಲಕ ಆಮಿಷಕ್ಕೆ ಒಳಗಾಗುವ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕ್ರೈಮ್ ಸಹಿತ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಕಾಲಿಕ ಸ್ಪಂದನ ಅಗತ್ಯ ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮರಬದ ಹೇಳಿದರು.
ಅವರು ಬುಧವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವಠಾರದಲ್ಲಿ ನಾಗರಿಕ ಸೇವಾ ಸಮಿತಿ ಬಂಟಕಲ್ಲು(ರಿ) ಬಂಟಕಲ್ಲು ಇದರ ಆಶ್ರಯದಲ್ಲಿ ಆರಕ್ಷಕ ಠಾಣೆ ಶಿರ್ವ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಅಟೋರಿಕ್ಷಾ ಚಾಲಕರ ಮಾಲಕರ ಸಂಘ ಬಂಟಕಲ್ಲು, ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಸಹಕಾರದಲ್ಲಿ ಏರ್ಪಡಿಸಿದ ‘ಪೊಲೀಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ಉಡುಪಿ, ಮಂಗಳೂರು ಭಾಗದಲ್ಲಿ ಮೊಬೈಲ್ ಮೂಲಕ ವಂಚನೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್‌ಗಳ ಬಗ್ಗೆ ಎಚ್ಚರ ವಹಿಸುವುದು, ಪ್ರಚೋದನಕಾರಿ ಮೆಸೆಜ್‌ಗಳನ್ನು ಲೈಕ್, ಫಾರ್‌ವರ್ಡ್ ಮಾಡುವುದೂ ಅಪರಾಧವಾಗಿದೆ ಎಂದರು.
ಎಎಸ್‌ಐ ಶ್ರೀಧರ್ ಮತ್ತು ಮಹಿಳಾ ಪೊಲೀಸ್ ಗೀತಾ ಮಾತನಾಡಿ, ಮಹಿಳಾ ದೌರ್ಜನ್ಯ ಹಾಗೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾನೂನು, ಅಪ್ರಾಪ್ತರಿಂದ ವಾಹನ ಚಾಲನೆ ಅಪರಾಧಗಳ ಬಗ್ಗೆ ಮಾಹಿತಿ, ತಡೆಗಟ್ಟುವಿಕೆ, ಪೋಲಿಸ್ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಬಂಟಕಲ್ಲು ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ವೇದಿಕೆಯಲ್ಲಿ ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಗ್ರಾ.ಪಂ. ಸದಸ್ಯ ಸತೀಶ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಹೆಡ್ ಕಾನ್ಟೇಬಲ್ ಮಂಜುನಾಥ ಅಡಿಗ, ಬಂಟಕಲ್ಲು ಬೀಟ್ ಪೋಲಿಸ್ ಶಿವಾನಂದ, ಮಂಜುನಾಥ್, ನಾಗರಿಕರು ಉಪಸ್ಥಿತರಿದ್ದರು.
ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.