
ಜು.24 ರಂದು ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ
Monday, July 21, 2025
ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜು.24 ರಂದು ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ, ವಿಶೇಷ ಉತ್ಸವ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ವೀರೇಂದ್ರ ಅಮೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೃಹತ್ ಬಂಡೆಗಳಿಂದ ಆವೃತವಾದ ಗಿರಿಧಾಮದಲ್ಲಿರುವ ಆಕರ್ಷಣೀಯ, ಅತ್ಯಂತ ಪ್ರಾಚೀನ, ರಮ್ಯ ಈ ದೇವಸ್ಥಾನದ ದಕ್ಷಿಣ ಭಾಗದ ತಳದಲ್ಲಿರುವ ಗದಾತೀರ್ಥವೆಂಬ ಸರೋವರದಲ್ಲಿ ಅನಾದಿ ಕಾಲದಿಂದಲೂ ಆರೋಗ್ಯ ಸಮೃದ್ಧಿಯ ಸಂದೇಶ ಸಾರುವ ಆಟಿ ಅಮಾವಾಸ್ಯೆಯಂದು ಭಕ್ತಾಧಿಗಳು ಹಾಗೂ ವಿಶೇಷವಾಗಿ ನವದಂಪತಿಗಳು ಇಲ್ಲಿ ಪುಣ್ಯ ಸ್ನಾನಮಾಡಿ ಪಾರ್ವತಿ ಪರಮೇಶ್ವರರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಂಪ್ರದಾಯವಿದೆ.
ದೇವಸ್ಥಾನದಲ್ಲಿ ಅಮವಾಸ್ಯೆಯಂದು ಬೆಳಗ್ಗೆ 3 ಗಂಟೆಯಿಂದ ಓಂಕಾರ ಫ್ರೆಂಡ್ಸ್ ಮಧ್ವ, ಓಂಕಾರ ಮಹಿಳಾ ಘಟಕ, ಓಂಕಾರ ಶ್ರೀ ಶಾರದಾ ಭಜನಾ ಮಂದಿರ ಬೆಂಗತ್ತೋಡಿ ಇವರ ವತಿಯಿಂದ ಆಟಿಯ ಅಮೃತ ಎಂದು ಬಣ್ಣಿಸಲಾದ ಹಾಳೆ ಮರದ ಕೆತ್ತೆಯ ಕಷಾಯ ವಿತರಣೆ ನಡೆಯಲಿದೆ. ಆ ದಿನ ವಿಶೇಷ ತೀರ್ಥಸ್ನಾನ ಹಾಗೂ ದೇವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.