
ಆ.7 ರಂದು ವೀರಕಂಭದಲ್ಲಿ ಕೊರಗ ಸಮುದಾಯದ ವಿಶೇಷ ಸಭೆಗೆ ನಿರ್ಧಾರ
ಬಂಟ್ವಾಳ: ಅದಿವಾಸಿ ಕೊರಗ ಸಮುದಾಯದ ಜನರಿಗೆ ಎಲ್ಲಾ ಬಗೆಯ ಮೂಲ ದಾಖಲಾತಿ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಕೊರಗ ಸಮುದಾಯದ ಮೊದಲ ವಿಶೇಷ ಸಭೆ(ಅದಾಲತ್)ಯನ್ನು ಆ.7 ರಂದು ತಾಲೂಕಿನ ವೀರಕಂಭ ಗ್ರಾ.ಪಂ. ಸಭಾಭವನದಲ್ಲಿ ನಡೆಸಲು ಮಂಗಳವಾರ ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ಬಂಟ್ಚಾಳ ತಾಲೂಕು ಕೊರಗ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚ್ಚಿನ್ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಈ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆಯು ಉಪಸ್ಥಿತರಿದ್ದ ಎಲ್ಲಾ ಅಧಿಕಾರಿಗಳಿಗೂ ಅವರು ಸೂಚಿಸಿದರು.
ಈ ಸಭೆಯಲ್ಲಿ ಸಮುದಾಯದ ಆರೋಗ್ಯ ತಪಾಸಣೆ, ಪೊಲೀಸ್ ಇಲಾಖೆಯಿಂದ ಕಾನೂನು ಮಾಹಿತಿ ಸಹಿತ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆಯು ಅಧಿಕಾರಿಗಳಿಂದ ಮಾಹಿತಿ ಒದಗಿಸುವಂತೆಯು ಸಮುದಾಯದ ಮುಖಂಡ ಸುಂದರ್ ಬೆಳುವಾಯಿ ಅವರು ಈ ಸಂದರ್ಭ ಮನವಿ ಮಾಡಿದರು.
ಸಮುದಾಯದ ಮುಖಂಡ ಸುಂದರ್ ಅವರು ವಿಷಯ ಪ್ರಸ್ತಾವಿಸಿ ಕೊರಗ ಸಮುದಾಯದ ಯಾರೋಬ್ಬರಲ್ಲು ಯಾವುದೇ ರೀತಿಯ ಮೂಲ ದಾಖಲಾತಿಗಳೇ ಇಲ್ಲದಿದ್ದು, ಹಲವು ವರ್ಷದಿಂದ ಇದನ್ನು ಸಭೆಗಳಲ್ಲಿ ಪ್ರಸ್ತಾಪಿಸುತ್ತಲೇ ಬರುತ್ತಿದ್ದೆವೆ. ಆದರೆ ಈ ಬಗ್ಗೆ ಅಧಿಕಾರಿಗಳ್ಯಾರು ಗಮನಹರಿಸುತ್ತಿಲ್ಲ, ನಮಗೆ ಮೂಲ ದಾಖಲೆ ಪತ್ರ ಇಲ್ಲದಿರುವುದಕ್ಕೆ ಅಧಿಕಾರಿಗಳೇ ಜವಬ್ದಾರರು, ನಮ್ಮಲ್ಲಿ ಸಮರ್ಪಕವಾದ ದಾಖಲೆಗಳೇ ಇಲ್ಲದಿದ್ದರಿಂದ ಸರಕಾರದ ಯಾವುದೇ ಸವಲತ್ತು ಸಮುದಾಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇನ್ನು 100 ವರ್ಷವಾದರೂ ನಮಗೆ ದಾಖಲೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಗ್ರಾಮಮಟ್ಟದಲ್ಲಿ ಸಮುದಾಯದ ಜನರಿರುವಲ್ಲೇ ತಾಲೂಕುಮಟ್ಟದ ಅಧಿಕಾರಿಗಳು ಅಗಮಿಸಿ ಅದಾಲತ್‌ನಂತಹ ವಿಶೇಷ ಸಭೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳವಂತೆ ಆಗ್ರಹಿಸಿದರು.
ರಾಜೀವಗಾಂಧಿ ವಸತಿ ಯೋಜನೆಯಡಿ ವಸತಿ ಮಂಜೂರಾದರೂ, 9-11 ಸಿಂಗಲ್ ಸೈಟ್, ನಿರಾಪೇಕ್ಷಣಾ ಪತ್ರ ಮೊದಲಾದ ಸರಕಾರದ ಹೊಸ ನೀತಿಯಿಂದ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಅವರು ಗಮನ ಸೆಳೆದರು.
ಇದು ಸರಕಾರಿ ಮಟ್ಟದಲ್ಲಿ ಸರಿಪಡಿಸಬೇಕಾಗಿರುವುದರಿಂದ ಕೊರಗ ಸಮುದಾಯಕ್ಕೆ ಮಾತ್ರ ಈ ನಿಯಮಾವಳಿಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಭಾಧ್ಯಕ್ಷ ಸಚ್ಚಿನ್ ಕುಮಾರ್ ತಿಳಿಸಿದರು.
ತಹಶೀಲ್ದಾರರ ಗೈರು: ಅಸಮಾಧಾನ
ಕಳೆದ ಎರಡು ಸಭೆಗಳಲ್ಲಿ ತಹಶೀಲ್ದಾರರು ಗೈರು ಹಾಜರಾಗಿರುವುದಕ್ಕೆ ಸುಂದರಿ ಕನ್ಯಾನ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಮುಖ್ಯಸ್ಥರಾದ ತಹಶೀಲ್ದಾರರೇ ಕೊರಗ ಸಮುದಾಯದ ಸಭೆಗೆ ಗೈರು ಹಾಜರಾದರೆ ನಮ್ಮ ಸಮಸ್ಯೆಯನ್ನು ಅಲಿಸುವವರು ಯಾರು? ಪರಿಹರಿಸುವವರು ಯಾರು ಎಂದು ಅವರು ಪ್ರಶ್ನಿಸಿದರು. ಅನಿವಾರ್ಯ ಕಾರಣದಿಂದ ತಹಶೀಲ್ದಾರ್ ಗೈರ್ ಆಗಿದ್ದಾರೆ ಎಂದು ಸಭಾಧ್ಯಕ್ಷ ಸಚ್ಚಿನ್ ಕುಮಾರ್ ಸಮಜಾಯಿಷಿ ನೀಡಿದರು.
ನೋಟಿಸ್ ಜಾರಿ:
ಸಭೆಗೆ ಪೂರ್ವಸೂಚನೆ ನೀಡದೆ ಗೈರು ಹಾಜರಾಗಿದ್ದ ಕಂದಾಯ ಇಲಾಖೆಯ ಪಡಿತರ ವಿಭಾಗದ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಭಾಧ್ಯಕ್ಷ ಸಚ್ಚಿನ್ ಸಮಾಜ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.
ನಶಿಸುತ್ತಿರುವ ಸಮುದಾಯ!:
ಪ್ರಸಕ್ತ ದಿನಗಳಲ್ಲಿ ಕೊರಗ ಸಮುದಾಯ ನಶಿಸುವ ಹಂತದಲ್ಲಿದೆ. ಇದಕ್ಕೆ ಕಾರಣ ಹುಡುಕಿ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾದ ಸರಕಾರ, ಜಿಲ್ಲಾಡಳಿತ, ತಾಲೂಕಾಡಳಿತ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಕೊರಗ ಸಮುದಾಯದ ಮುಖಂಡ ಸುಂದರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಜನರ ಆರೋಗ್ಯದ ಕಾಳಜಿ ವಹಿಸಬೇಕಾದ ಆರೋಗ್ಯ ಇಲಾಖೆಯ ಸಂಚಾರಿ ಘಟಕ ಕಾಲೊನಿಗಳಿಗೆ ಭೇಟಿ ನೀಡುತ್ತಿಲ್ಲ, ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡುವಂತಿಲ್ಲ, ವೈದ್ಯರು ಇಲ್ಲವೇ ನಸ್೯ಗಳಾದರೂ ಬರಬೇಕು ಆದರೆ ಇವರು ಯಾರು ಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಸಮಸ್ಯೆ ನಮಗೆ ಬೇಡ!:
ಸಂಚಾರಿ ಆರೋಗ್ಯ ಘಟಕಕ್ಕೆ ವೈದ್ಯರ ಹುದ್ದೆ ಖಾಲಿ ಇದೆ. ಹಾಗೆಯೇ ವಾಹನವಿದ್ದರೂ ಅದಕ್ಕೆ ಚಾಲಕನಿಲ್ಲದೆ ಸಮಸ್ಯೆಯಾಗಿದೆ. ಆದರೂ ನಸ್೯ಗಳು ಬಸ್‌ನಲ್ಲಿ ಸಂಚರಿಸಿ ಸೇವೆ ನೀಡುತ್ತಾರೆ. ಅವರನ್ನು ಪ್ರತಿನಿತ್ಯ ತೀರಾ ಗ್ರಾಮೀಣ ಭಾಗಕ್ಕೆ ಬಸ್‌ನಲ್ಲಿ ಕಳಿಸಲು ಸಾಧ್ಯವೇ ಎಂದು ತಾಲೂಕು ಆರೋಗ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಅದು ನಿಮ್ಮ ಸಮಸ್ಯೆ ಅದನ್ನು ನಮ್ಮಲ್ಲಿ ಹೇಳಿದರೆ ಏನು ಪ್ರಯೋಜನ ಅದನ್ನು ಸರಕಾರ, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.
ಈ ಸಂದರ್ಭ ಸುರಕ್ಷಾಧಿಕಾರಿ ಅವರು ಪ್ರತಿಕ್ರಿಯಿಸಿ ಸಮುದಾಯದ ಆರೋಗ್ಯ ತಪಾಸಣೆಗೊಳಪಡಿಸಿದಾಗ ಹಲವರಿಗೆ ಬಿ.ಪಿ., ಶುಗರ್ ಪತ್ತೆಯಾಗಿದೆ. ಪಿಎಂಜಿವೈ ಮಾಡಿಸಿಕೊಳ್ಳಲು ಹಲವರಲ್ಲಿ ಆಧಾರ್, ರೇಶನ್ ಕಾಡ್೯ ಇಲ್ಲ, ಇದ್ದವರದು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ತಿಳಿಸಿದರು.
ಕಾಯಿಲೆಯ ಬಗ್ಗೆ ವರದಿ ಇದ್ದರೆ ಅವರಿಗೆ ಸ್ಥಳೀಯ ಪ್ರಾ.ಆ. ಕೇಂದ್ರದಲ್ಲಿ ಚಿಕಿತ್ಸೆಕೊಡಿಸಲು ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸಭಾಧ್ಯಕ್ಷ ಸಚ್ಚಿನ್ ಸೂಚಿಸಿದರಲ್ಲದೆ ವೈದ್ಯರ ಮತ್ತು ಚಾಲಕ ಹುದ್ದೆ ಖಾಲಿ ಇರುವ ಬಗ್ಗೆ ಪ್ರಸ್ತಾವನೆ ಕಳಿಸಲಾಗಿದೆಯೆ ಎಂದು ಪ್ರಶ್ನಿಸಿದರು. ಈಗಾಗಲೇ ಹಲವು ಬಾರಿ ಕಳಿಸಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು.
ಸಮಾಜಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ವಿನಯಕುಮಾರಿ ಕೆ.ಬಿ. ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.