
ದಲಿತ ಮುಖಂಡ, ಬಂಟ್ವಾಳ ಪುರಸಭಾಸದಸ್ಯ ಜನಾರ್ದನ ಚಂಡ್ತಿಮಾರ್ ನಿಧನ
ಬಂಟ್ವಾಳ: ಬಂಟ್ವಾಳ ಪುರಸಭಾ ಸದಸ್ಯ, ದಲಿತ ಮುಖಂಡ, ಬಂಟ್ವಾಳ ಸಮೀಪದ ಚೆಂಡ್ತಿಮಾರ್ ನಿವಾಸಿ ಜನಾರ್ದನ ಚೆಂಡ್ತಿಮಾರ್ (55) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿವಿಧ ಹುದ್ದೆಯಲ್ಲು ಕಾರ್ಯನಿರ್ವಹಿಸಿದ್ದರು.
ಇತ್ತೀಚೆಗಿನ ಕೆಲ ಸಮಯಗಳಿಂದ ಅನಾರೋಗ್ಯಕ್ಕೀಡಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದು, ರಾಜಕೀಯ, ಸಾಮಾಜಿಕ ಚಟುವಟಿಕೆಗಳಿಂದಲು ದೂರವಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಪುರಸಭೆಯ ವಾಡ್೯ 5 ಸದಸ್ಯರಾಗಿದ್ದ ಅವರು ಶೋಷಿತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು. ಅದಿದ್ರಾವಿಡ ಸಮುದಾಯದ ಮುಖಂಡರಾಗಿದ್ದ ಅವರು ಚೆಂಡ್ತಿ ಮಾರ್ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷರು, ಅಲೇರಿ ಸತ್ಯಸಾರಮಾನಿ ಕಾನದ ಕಟದ ಮೂಲ ಕ್ಷೇತ್ರ, ಬಂಟ್ವಾಳ ಜಕ್ರಿಬೆಟ್ಟು ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಅನೇಕ ಸತ್ಯ ಸಾರಮಾನಿ ಕ್ಷೇತ್ರದ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ವಿಶೇಷ ಸೇವೆ,ಬಂಟ್ವಾಳ ಡಿಸಿಡಿಯರ್ ಲ್ಯಾಂಡ್ ಟಾಸ್ಕ್ ಫೋರ್ಸ್ ಸದಸ್ಯರು ಆಗಿದ್ದರು.
ಬಿ.ಸಿ.ರೋಡ್‌ನಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತುಳುನಾಡಿನ ಅವಳಿ ವೀರರು ಕಾರಣಿಕ ಪುರುಷರಾದ ಸತ್ಯ ಸಾರಮಾನಿ ಕಾನದ ಕಟದರ ಸಮುದಾಯವನ್ನು ಕಟ್ಟುವುದ್ಧಕ್ಕಾಗಿ ಅವಿರತ ಶ್ರಮಿಸಿದ್ದರು.
ಅಂಬೇಡ್ಕರ್ ಭವನದಲ್ಲಿ ಅಂತಿಮ ದರ್ಶನ:
ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಬಿ.ಸಿ.ರೋಡಿನ ತಾಲೂಕು ಅಂಬೇಡ್ಕರ್ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭ ನುಡಿನಮನ ಸಲ್ಲಿಸಿದ ಮಾಜಿ ಸಚಿವ ರಮಾನಾಥ ರೈ ಅವರು,ಜನಾರ್ದನ ಚಂಡ್ತಿಮಾರ್ ಅವರ ಅಗಲುವಿಕೆಯು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಜಿಲ್ಲೆಯ ಒಬ್ಬ ಸಮುದಾಯ ಮತ್ತು ಪಕ್ಷವನ್ನು ಮುನ್ನಡೆಸುವ ಮುಖಂಡರನ್ನು ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಭಾವಪೂರ್ಣ ಶ್ರದ್ದಾಂಜಲಿಯನ್ನು ಸಮರ್ಪಿಸುತ್ತೇನೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ತುಂಗಪ್ಪ ಬಂಗೇರ, ಶೇಖರ ಕುಕ್ಕೇಡಿ, ಪದ್ಮಶೇಖರ್ ಜೈನ್, ಪುರಸಭಾ ಅಧ್ಯಕ್ಷ ವಾಸುಪೂಜಾರಿ, ಉಪಾಧ್ಯಕ್ಷ ಮೊನೀಶ್ ಆಲಿ, ಬೂಡ ಅಧ್ಯಕ್ಷ ಬೇಬಿಕುಂದರ್, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ದಿನೇಶ್ ಅಮ್ಟೂರು, ಪ್ರಜ್ವಲ್ ಶೆಟ್ಟಿ, ಶೈಲಜಾ ರಾಜೇಶ್, ನವಾಜ್ ಬಡಕಬೈಲು, ಪ್ರಭಾಕರ ಪ್ರಭು,ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಅಬ್ಬಾಸ್ ಆಲಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ದಲಿತ ಮುಖಂಡ ವಸಂತ ಬಿ.ಕೆ. ಬೆಳ್ತಂಗಡಿ, ಬಂಟ್ವಾಳ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಆನಂತಪದ್ಮನಾಭ, ಕಂದಾಯ ನಿರೀಕ್ಷಕ ಜನಾರ್ಧನ ಜೆ. ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಿತ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.
ಬಳಿಕ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.