
ಪಾಣೇರ್ ಸೇತುವೆ: ಎನ್‌ಐಟಿಕೆ ತಂಡ ವರದಿ ಸಲ್ಲಿಕೆ: ಲಘುವಾಹನ ಸಂಚಾರಕ್ಕೆ ತಾತ್ಕಾಲಿಕ ಅನುಮತಿ
ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ ಲಘು ವಾಹನಗಳಿಗಷ್ಟೇ ತಾತ್ಕಾಲಿಕವಾಗಿ ಸಂಚರಿಸಲು ಅವಕಾಶ ನೀಡಬಹುದು ಎಂದು ಎನ್‌ಐಟಿಕೆ ಅಧ್ಯಯನ ತಂಡ ಪುರಸಭೆ ಮುಖ್ಯಾಧಿಕಾರಿಗೆ ವರದಿ ಸಲ್ಲಿಸಿದೆ.
ಸೇತುವೆಯ ಧಾರಣಾ ಸಾಮರ್ಥ ಪರಿಶೀಲನೆಗೆ ಸಂಬಂಧಿಸಿ ಮತ್ತಷ್ಟು ಅಧ್ಯಯನ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನದಂತೆ ಎನ್‌ಐಟಿಕೆ ತಂಡ ಕೆಲ ದಿನಗಳ ಹಿಂದೆ ಆಗಮಿಸಿ ಪ್ರಾಥಮಿಕ ಸಮೀಕ್ಷೆ ನಡೆಸಿತ್ತು.
ಸೇತುವೆಯನ್ನು ಬಲಪಡಿಸಲು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಾಂತ್ರಿಕ ಅಧ್ಯಯನವನ್ನು ವಿವರವಾಗಿ ನಡೆಸಬೇಕು ಎಂದು ಪ್ರೊ. ಬಿ. ಮನು ಮಾರ್ಗದರ್ಶನ ದಲ್ಲಿ, ಸಹಾಯಕ ಪ್ರೊಫೆಸರ್‌ಗಳಾದ ಡಾ. ಜೆ. ವಿಜಯ ವೆಂಗಡೇಶ್ ಕುಮಾರ್, ಡಾ. ಟಿ. ಪಳನಿಸ್ವಾಮಿ ಅವರನ್ನು ಒಳಗೊಂಡ ತಂಡ ಬಂಟ್ವಾಳ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಸೂಚಿಸಿದೆ.
ವರದಿಯಲ್ಲಿ ಏನಿದೆ?
ಪಾಣೆಮಂಗಳೂರು ಹಳೆಯ ಸೇತುವೆಯ ಧಾರಣಾ ಸಾಮರ್ಥ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸೇತುವೆ ಗಟ್ಟಿಮುಟ್ಟಾಗಿರುವ ಕುರಿತು ಈಗಲೇ ನಿಖರವಾಗಿ ನಿರ್ಧರಿಸುವ ಬದಲು ಸಮರ್ಪಕ ಅಧ್ಯಯನ ನಡೆಸಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲು ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ದುರಸ್ತಿ ಕಾರ್ಯ, ಸೇತುವೆಯನ್ನು ಗಟ್ಟಿಗೊಳಿಸುವ ಹಂತದ ಕ್ರಮಗಳನ್ನು ಮಾಡಬೇಕು. ಸಮಗ್ರ ತಾಂತ್ರಿಕ ಅಧ್ಯಯನವನ್ನು ಆದಷ್ಟು ಬೇಗ ಕೈಗೊಳ್ಳಬೇಕು. ಸೇತುವೆ ಪ್ರವೇಶದ ಆರಂಭಿಕ ಜಾಗದಲ್ಲಿ ತುರ್ತು ಕಾಮಗಾರಿಗಳನ್ನು ನಡೆಸಲು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನಷ್ಟು ವಿವರವಾದ ಪರೀಕ್ಷೆಯ ಅಗತ್ಯವಿದೆ ಎಂದು ತಂಡ ಶಿಫಾರಸು ಮಾಡಿದೆ.