ಡಿವೈಎಫ್‌ಐ ವತಿಯಿಂದ ಮಂಗಳೂರಿನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

ಡಿವೈಎಫ್‌ಐ ವತಿಯಿಂದ ಮಂಗಳೂರಿನಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ


ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸರಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ನಿಮಾನ್ಸ್ ಮೆದುಳು, ನರ ಮತ್ತು ಮಾನಸಿಕ ಆರೋಗ್ಯ ಸೇವೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಡಿವೈಎಫ್‌ಐ ಘಟಕ ಜಿಲ್ಲಾಧಿಕಾರಿ ದರ್ಶನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಕಾಲಘಟ್ಟದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಖಾಯಿಲೆ ಬಹಳ ಗಂಭೀರವಾಗಿ ಪರಿಗಣಿಸಿವೆ. ರಾಜ್ಯದಲ್ಲಿ ಪ್ರತೀ ವರುಷ 70 ಸಾವಿರದಷ್ಟು ಕ್ಯಾನ್ಸರ್ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ವರದಿಯಾಗಿದೆ. 

ಅದೇ ರೀತಿ ಹೃದಯ ಸಂಬಂಧಿಸಿದ ಕಾಯಿಲೆಗಳೂ ಕೂಡಾ ಹೆಚ್ಚಿನ ಜನಸಾಮಾನ್ಯರಲ್ಲಿ ಪತ್ತೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಪ್ರಾಯದ ಯುವಕರು ಹಠಾತ್ ಹೃದಯಾಘಾತದಿಂದ ಸರಣಿ ಸಾವು ಸಂಭವಿಸುತ್ತಿರುವ ವಿದ್ಯಾಮಾನಗಳು ಚರ್ಚೆಗೆ ಗ್ರಾಸವಾಗಿದ್ದು, ಇದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ದಿನನಿತ್ಯ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಕಾಯಿಲೆ ಹಾಗೂ ಮೆದುಳು, ನರ, ಮಾನಸಿಕ ಖಾಯಿಲೆಗಳಿಗೆ ಜನ ತುತ್ತಾಗುತ್ತಿದ್ದು ಈ ಬಗ್ಗೆ ಹೆಚ್ಚಿನ ಚಿಕಿತ್ಸೆ ಪಡೆಯಬೇಕೆಂದರೆ ದುಬಾರಿ ಚಿಕಿತ್ಸಾ ವೆಚ್ಚ ವಿಧಿಸುವ ಖಾಸಗಿ ಆಸ್ಪತ್ರೆಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

ಹಠಾತ್ ಹೃದಯಾಘಾತಗಳಿಂದ ಭಯಗೊಂಡಿರುವ ಜನಸಾಮಾನ್ಯರು ಇಸಿಜಿ ಪರೀಕ್ಷೆ, ಅಂಜಿಯೋಗ್ರಾಂನಂತಹ ನಿಖರ ಪರೀಕ್ಷೆಗಳನ್ನು ನಡೆಸಲು ಮುಂದಾಗುತ್ತಿದ್ದಾರೆ. ಇಂತಹ ದುಬಾರಿ ಪರೀಕ್ಷೆ-ಚಿಕಿತ್ಸೆಗಳನ್ನು ಹೃದ್ರೋಗದ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಅನಗತ್ಯವಾಗಿ ನಡೆಸಲಾಗುತ್ತಿದೆ. ಈ ಅತ್ಯಾಧುನಿಕ ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚಾಗಿ ಲಭ್ಯ ಇರುವುದರಿಂದ ಜನಸಾಮಾನ್ಯರಿಗೆ ಕೈಗೆ ಎಟುಕುವುದಿಲ್ಲ. ಮಾತ್ರವಲ್ಲ, ಲಾಭಕ್ಕಾಗಿ ದುರುಪಯೋಗ ಪಡಿಸುವ ಸಾಧ್ಯತೆಗಳೂ ಹೆಚ್ಚುತ್ತಿವೆ. ಇಂದಿನ ಒತ್ತಡದ ಜೀವನ, ಬದಲಾದ ಜೀವನ ಶೈಲಿಯಿಂದ ಬಹುತೇಕ ಜನ ಮಾನಸಿಕ ಖಾಯಿಲೆ, ಖಿನ್ನತೆಗಳಿಗೆ ಬಲಿಯಾಗಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ.

ಕ್ಯಾನ್ಸರ್ ಮತ್ತು ಹೃದಯ ಸಂಬಂಧಿಸಿದ ಗಂಭೀರ ರೋಗಗಳಿಗೆ ಸರಕಾರಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಲಭ್ಯವಿರದ ಕಾರಣ ಬಡವರನ್ನು ಆಯುಷ್ಮಾನ್ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ ಸರಕಾರಿ ಆರೋಗ್ಯ ವಿಮೆಯ ದುಡ್ಡನ್ನು ಖಾಸಗಿ ಆಸ್ಪತ್ರೆಗಳ ಖಜಾನೆ ತುಂಬಲು ಅವಕಾಶ ಮಾಡಿಕೊಟ್ಟಂತಾಗಿದೆ. ಮಧ್ಯಮ ವರ್ಗವಂತೂ ಖಾಸಗಿ ಆಸ್ಪತ್ರೆಗಳಿಗೆ ದಾವಿಸಿದರೆ ಅಲ್ಲಿನ ದುಬಾರಿ ವೆಚ್ಚ ಬರಿಸುವ, ತಮ್ಮ ದುಡಿಮೆಯ ಬಹುಭಾಗವನ್ನು ವ್ಯಯಿಸುವ ಗಂಭೀರ ಪರಿಸ್ಥಿತಿಗೆ ಗುರಿಯಾಗಿದ್ದಾರೆ. 

ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಖಾಯಿಲೆಗೆ ತುತ್ತಾದವರನ್ನು ತಮಗೆ ಮನಬಂದಂತೆ ಅನಗತ್ಯ ಪರೀಕ್ಷೆ ನಡೆಸುವ, ದುಬಾರಿ ಚಿಕಿತ್ಸೆಗಳಿಗೆ ಒಳಪಡಿಸುವುದರಿಂದ ಜನಸಾಮಾನ್ಯರು ತಮ್ಮ ಮನೆ ಮಠ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ರೋಗಿ ಆಸ್ಪತ್ರೆಯ ದುಬಾರಿ ವೆಚ್ಚ ಪೂರ್ಣವಾಗಿ ಪಾವತಿಸುವಲ್ಲಿ ವಿಫಲನಾದರೆ ಅದು ಸರಕಾರದ ಕೆಪಿಎಮ್‌ಎ ಕಾಯ್ದೆಯನ್ನು ಉಲ್ಲಂಘಿಸಿ ರೋಗಿ ಅಥವಾ ರೋಗಿಯ ಕಡೆಯವರು ಹಣ ಪಾವತಿಸುವವರೆಗೆ ರೋಗಿಗಳನ್ನು ಅಕ್ರಮ ಬಂಧನದಲ್ಲಿಡುವ, ಹೆಣಗಳನ್ನು ದಿನಗಟ್ಟಲೆ ಬಿಟ್ಟುಕೊಡದ ಪ್ರಕರಣಗಳು ವರದಿಯಾಗುಲೇ ಇರುತ್ತದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು, ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಸರಾಸರಿಗಿಂತ ತೀರಾ ಕೆಳಮಟ್ಟದಲ್ಲಿದೆ. ತಾಲೂಕು, ಜಿಲ್ಲಾಸ್ಪತ್ರೆಗಳಿಗೆ ತೆರಳಲು ಜನ ಭಯಪಡುವಂತಾಗಿದೆ. ಇನ್ನು ಕ್ಯಾನ್ಸರ್, ಹೃದಯ ಸಂಬಂಧಿತ ಹಾಗೂ ಮೆದುಳು, ನರ, ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಕಿದ್ವಾಯಿ, ಜಯದೇವ, ನಿಮಾನ್ಸ್‌ನಂತಹ ಸೂಪರ್ ಸ್ಪೆಷಾಲಿಟಿ ಶೈಲಿಯ ಆಸ್ಪತ್ರೆಗಳು ಈವರೆಗೂ ಸ್ಥಾಪಿಸಲು ಸಾಧ್ಯವಾಗಿಲ್ಲ. ದ.ಕ. ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಹಲವು ದಶಕಗಳಿಂದ ಒತ್ತಾಯಿಸುತ್ತಾ ಬಂದರೂ ಸರಕಾರದ ಬಜೆಟ್ ಅವಧಿಯಲ್ಲಿ ಘೋಷಣೆಯನ್ನಷ್ಟೇ ಕೈಗೊಳ್ಳಲಾಗಿದೆ ಹೊರತು ಅದಕ್ಕೆ ಹಣಕಾಸನ್ನು ಮೀಸಲಿರಿಸಲು ಈವರೆಗೂ ಸಾಧ್ಯವಾಗಿಲ್ಲ.

ಕರ್ನಾಟಕ ರಾಜ್ಯ ಸರಕಾರ ಬೆಂಗಳೂರು, ಮೈಸೂರು, ಕಲಬುರಗಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭಿಸಿದ ಮಾದರಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಘಟಕಗಳನ್ನು ಸ್ಥಾಪಿಸಲು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಮೆದುಳು, ನರ ಮತ್ತು ಮಾನಸಿಕ ಕಾಯಿಲೆಗಳಿಗೆ ನಿಮಾನ್ಸ್ ಆಸ್ಪತ್ರೆ ಆರೋಗ್ಯ ಸೇವೆಗಳನ್ನೂ ಸಹಿತ ದ.ಕ. ಜಿಲ್ಲೆಯಲ್ಲಿ ಪ್ರಾರಂಭಿಸಲು ಮುಂದಾಗಬೇಕು. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಹಣಕಾಸನ್ನು ಶೀಘ್ರಗತಿಯಲ್ಲಿ ಬಿಡುಗಡೆಗೊಳಿಸಲು ಸರಕಾರ ಕ್ರಮಕೈಗೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ, ಸಮುದಾಯ, ತಾಲೂಕು ಆಸ್ಪತ್ರೆಗಳನ್ನು ನಿರ್ಮಿಸಿ, ಖಾಲಿ ಇರುವ ವೈದ್ಯ, ಸಿಬ್ಬಂದಿ ಸಹಿತ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸುವ ಮೂಲಕ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕೆಂದು ಎಂದು ದ.ಕ. ಜಿಲ್ಲಾ ಡಿವೈಎಫ್‌ಐ ಘಟಕ ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಪದಾಧಿಕಾರಿಗಳಾದ ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ಮಾಧುರಿ ಬೋಳಾರ, ರಜಾಕ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article