ಕುದ್ಮುಲ್‌ರಿಂದ ದಲಿತೋದ್ಧಾರದ ಕಾರ್ಯ: ವಾದಿರಾಜ್

ಕುದ್ಮುಲ್‌ರಿಂದ ದಲಿತೋದ್ಧಾರದ ಕಾರ್ಯ: ವಾದಿರಾಜ್


ಕೊಣಾಜೆ: ಕುದ್ಮಲ್ ರಂಗರಾಯರು ಶೋಷಿತ ಸಮುದಾಯಗಳಿಂದಲೇ ದಲಿತೋದ್ಧಾರಕ ಎನಿಸಿ ಕೊಂಡವರು. ಗಾಂಧೀಜಿ, ಅಂಬೇಡ್ಕರ್, ಸಾವರ್ಕರ್ ಅವರಿಗಿಂತ ಮೊದಲೇ ದಲಿತೋದ್ಧಾರದ ಕಾರ್ಯ ಮಾಡಿದವರು. ಊರುಗಳನ್ನು ಬೆಸೆಯುವ ಸೇತುವೆಗಳು ಇಲ್ಲದ ಕಾಲದಲ್ಲಿಯೇ ಸಾಮಾಜಿಕ ಸೇತುವೆ ಯಾಗಿ ಕಾರ್ಯನಿರ್ವಹಿಸಿದವರು ಕುದ್ಮಲ್ ರಂಗರಾಯರು ಎಂದು ಲೇಖಕ, ಕರ್ನಾಟಕ ಸಾಮರಸ್ಯ ವೇದಿಕೆಯ ಸಂಚಾಲಕ ವಾದಿರಾಜ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾತ್ಮ ಕುದ್ಮುಲ್ ರಂಗರಾವ್ ಅವರ 166ನೇ ಜನ್ಮದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುದ್ಮಲ್ ರಂಗರಾಯರು ತಮ್ಮ 65ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಂಡು ’ಈಶ್ವರಾನಂದ’ ರಾದಾಗ ತಮ್ಮ ದಾಖಲೆಗಳನ್ನೆಲ್ಲ ಹೋಮಾಗ್ನಿಗೆ ಸಮರ್ಪಿಸಿದರು. ಅವರಿಗೆ ನೀಡಿದ್ದ ’ರಾವ್ ಬಹದ್ದೂರ್’ ಪ್ರಶಸ್ತಿ ಸಹಿತ ಅನೇಕ ಧಾಖಲೆಗಳು ನಾಶವಾದುದರಿಂದ ಅವರ ಬಗೆಗೆ ಅಧ್ಯಯನ ಕಷ್ಟವಾಗಿದೆ. 

ತಮ್ಮ ದುಡಿಮೆಯಿಂದ ಬಂದ ಹಣದಿಂದ ದಲಿತರಿಗೆ ಭೂಮಿ ದೊರಕಿಸಿಕೊಟ್ಟವರು. ದಲಿತರಿಗೆ ಶಿಕ್ಷಣ ದೊರೆಯಬೇಕೆಂಬ ಕಾರಣಕ್ಕಾಗಿ 20 ಶಾಲೆಗಳನ್ನು ಆರಂಭಿಸಿದವರು. ಮೇಲ್ವರ್ಗದ ತಮ್ಮದೇ ಸಮುದಾಯ ಗಳಿಂದ ಸಾಮಾಜಿಕ ಬಹಿಷ್ಕಾರ, ಶಾಲೆಯ ದಾರಿಗೆ ಅಡ್ಡಿ ಆತಂಕಗಳನ್ನು ಎದುರಾದಾಗ ಅದನ್ನು ದೂರ ಮಾಡಿದವರು. ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಿದವರು.ದಲಿತರಿಗೆ ವಸತಿನಿಲಯಗಳ ನಿರ್ಮಾಣ, ಶಿಕ್ಷಣದೊಂದಿಗೆ ವೃತ್ತಿ ಮಾರ್ಗದರ್ಶನ, ಮಕ್ಕಳಲ್ಲಿ ವಿನಯದ ಗುಣತುಂಬಿದವರು. ಮಹಿಳೆಯರಿಗೆ ಆದಿದ್ರಾವಿಡ ಸಹಕಾರಿ ಸಂಘ ಆರಂಭಿಸಿದವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಮಾತನಾಡಿ, ಜನಗಣತಿ ಸಂದರ್ಭದಲ್ಲಿ ದಲಿತ ಕಾಲನಿಗಳಿಗೆ ಭೇಟಿ ನೀಡದೆ ಹೋದರೆ ಜಾತಿ ಕೆಡುತ್ತೆ ಅಂತ ಭಾವಿಸಿ ಕೃತಕ, ಕಲ್ಪಿತ ವರದಿಗಳನ್ನು ನೀಡುವ ಶಿಕ್ಷಕರಿದ್ದಾರೆ. ಆದರೆ ಶೋಷಿತರಿಗಾಗಿ ಬದುಕನ್ನೇ ಮುಡಿಪಿಟ್ಟ ಬದುಕಿನ ಕೊನೆಯಲ್ಲಿ ಒಂದು ತಟ್ಟೆ ಮಾತ್ರ ಉಳಿಸಿಕೊಂಡಿದ್ದ ಕುದ್ಮಲ್ ದಲಿತರ ಬಾಳಿಗೆ ಬೆಳಕಾದವರು ಎಂದರು.

ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ. ವೈ ಸಂಗಪ್ಪ ಉಪಸ್ಥಿತರಿದ್ದರು. ವಿವಿಯ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವಿಶೇಷಾಧಿಕಾರಿ ಪ್ರೊ. ನರಸಿಂಹಯ್ಯ ಸ್ವಾಗತಿಸಿದರು. ಮಂಗಳೂರು ವಿವಿ ಶಿಕ್ಷಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ವಿಜಯರಾಜ್ ವಂದಿಸಿದರು. ವಿದ್ಯಾರ್ಥಿ ರಕ್ಷಿತ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article