
ಮಾಬುಕಳದಲ್ಲಿ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮ
ಕುಂದಾಪುರ: ಬ್ರಹ್ಮಾವರ ತಾಲೂಕು ಮಾಬುಕಳ ಕುಮ್ರಗೋಡು ಶ್ರೀ ಸಿದ್ಧಿವಿನಾಯಕ ದೇಗುಲದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮ ಗುರುವಾರ ನಡೆಯಿತು.
ಗಂಗೆಗೆ ಬಾಗಿನ ಅರ್ಪಿಸುವ 'ಗಂಗಾಬನಿ' ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೃಷಿಕ ಕೂಡ್ಲಿ ಶ್ರೀನಿವಾಸ ಉಡುಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕುಂದಾಪುರ ಪ್ರಾಂತ್ಯದಲ್ಲಿ ಹಲವು ಆಚರಣೆಗಳಿದ್ದು, ಗಂಗೆಗೆ ಬಾಗಿನ ಅರ್ಪಿಸುವ ಆಚರಣೆ ಕೂಡ ಇದರಲ್ಲಿ ಒಂದು. ಪ್ರಕೃತಿ ಮಾತೆಗೆ ಗೌರವ ಸಲ್ಲಿಸುವುದರ ಜತೆಗೆ ನೆರೆ ಹಾವಳಿಯಿಂದ ನಮ್ಮನ್ನ ಕಾಪಾಡುವಂತೆ, ನಮ್ಮ ಬೆಳೆ, ಜೀವನ ಸಮೃದ್ಧವಾಗಲಿ ಎಂದು ಕೋರುವ ಆಚರಣೆ ಇದಾಗಿದೆ ಎಂದು ತಿಳಿಸಿದರು.
ಕುಂಪಾಪ್ರ ಕನ್ನಡದ ಅಧ್ಯಯನಕಾರ ಮನು ಹಂದಾಡಿ ಮಾತನಾಡಿ, ಕುಂದಾಪ್ರ ಭಾಷೆ, ಬದುಕಿನಲ್ಲಿ ನೂರಾರು ವಿಶೇಷತೆ ಇದೆ. ಇದರ ಬಗ್ಗೆ ಬಗೆದಷ್ಟೂ ಮುಗಿಯದ ವಿಚಾರಗಳು ಒಡಲಾಳದಲ್ಲಿ ಅಡಗಿವೆ. ಕುಂದಾಪ್ರ ಕನ್ನಡ ದಿನಾಚರಣೆ ಮೂಲಕ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದರ ಜತೆಯಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಕಲಿಯಲು ಸಹಾಯವಾಗಿದೆ. ಆದರೂ ನಮ್ಮ ಭಾಷೆ, ಬದುಕಿನ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ ಎಂದರು. ಹಾಗೂ ಗಂಗಾಬನಿ ಆರಣೆಯ ಮಹತ್ವದ ಕುರಿತು ತಿಳಿಸಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಂದಾಡಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಪೂಜಾರಿ, ನಟ ಪ್ರಭಾಕರ ಕುಂದರ್ ಮಾಬುಕಳ ಉಪಸ್ಥಿತರಿದ್ದರು.
ಸುರೇಶ್ ಕುಮಾರ್ ಕುಮ್ರಗೋಡು ಸ್ವಾಗತಿಸಿ, ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರರಾಜ್ ಸಾಸ್ತಾನ ಕಾರ್ಯಕ್ರಮ ನಿರೂಪಿಸಿ, ಸುನಿಲ್ ಪಾಂಡೇಶ್ವರ ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಗಣ್ಯರೆಲ್ಲರೂ ಸೇರಿ ಸೀತಾ ನದಿಗೆ ಬಾಗಿನ ಅರ್ಪಿಸಿದರು.