
ಮಗು ಮಾರಾಟ ಪ್ರಕರಣ: ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ
ಮಂಗಳೂರು: 2013ರಲ್ಲಿ ನಡೆದಿದ್ದ ಎರಡೂವರೆ ವರ್ಷದ ಹೆಣ್ಣು ಮಗುವಿನ ಮಾರಾಟ ಪ್ರಕರಣದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಲಿನೆಟ್ ವೇಗಸ್, ಜೊಸ್ಸಿ ವೇಗಸ್ ಹಾಗೂ ಲಸ್ಸಿ ವೇಗಸ್ ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ವಿವರ..
2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಎಂಬವರು ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ಸಂದರ್ಭ ಲಿನೆಟ್ ವೇಗಸ್ ಎಂಬವರ ಮನೆಯಲ್ಲಿ ಮಾರಾಟಕ್ಕೆ ಮಗುವೊಂದನ್ನು ಇಟ್ಟಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಬಳಿಕ ಚೈಲ್ಡ್‌ಲೈನ್ ಸಂಸ್ಥೆಯವರು ಲಿನೆಟ್ ಮನೆಗೆ ತೆರಳಿ ಮಗುವಿನ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಆಕೆ ಮಗು ತನ್ನದೇ ಎಂದು ಪ್ರತಿಪಾದಿಸಿದ ಲಿನೆಟ್ ತಾನು ಹೆತ್ತಿರುವುದಕ್ಕೆ ಮಂಗಳೂರಿನ ನರ್ಸಿಂಗ್ ಹೋಂವೊಂದರ ಡಿಸ್‌ಚಾರ್ಜ್ ದಾಖಲೆಗಳನ್ನೂ ತೋರಿಸಿದ್ದಳು.
ಆದರೆ ಕಾರ್ಯಾಚರಣೆ ನಡೆಸಿ ಮಗುವಿನ ನಿಜ ತಾಯಿಯನ್ನು ಪತ್ತೆ ಹಚ್ಚಲಾಯಿತು. ಆ ಮಗು ಉತ್ತರ ಕರ್ನಾಟಕ ಮೂಲದ ರಂಗವ್ವ ಎಂಬವರದ್ದಾಗಿತ್ತು. ಕಟ್ಟಡದ ಕೆಲಸಕ್ಕೆ ಬಂದಿದ್ದ ರಂಗವ್ವ ಬಡತನದಿಂದ ಮಗುವನ್ನು ಸುಮಾರು 90 ಸಾವಿರಕ್ಕೆ ಲಿನೆಟ್‌ಗೆ ಮಾರಾಟ ಮಾಡಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು.
ಬಳಿಕ ಅಂದಿನ ಪೊಲೀಸ್ ಕಮಿಷನರ್ಗೆ ಮಗುವಿನ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್ ಕಮಿಷನರ್ ಸಹಕಾರದ ಮೇರೆಗೆ ದುಬೈಯಲ್ಲಿರುವ ಮುಸ್ಲಿಂ ದಂಪತಿಗೆ ಮಗು ಬೇಕಾಗಿದೆ ಎಂದು ಲಿನೆಟ್ ಅನ್ನು ನಂಬಿಸಲಾಗಿತ್ತು. ಅದರಂತೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಚಿಲ್ಡ್ರನ್ ಕ್ಲಿನಿಕ್‌ಗೆ ಮಗುವಿನ ಆರೋಗ್ಯ ತಪಾಸಣೆಗೆ ಬರಲಿಕ್ಕಿದೆ. ಹೆಲ್ತ್ ಚೆಕಪ್ ಆದ ಬಳಿಕ ಮಗುವನ್ನು ಮಾರಾಟ ಮಾಡುತ್ತೇನೆ, ಅಲ್ಲಿ ನೀವು 2 ಲಕ್ಷ ರೂ. ಹಣ ನೀಡಿ ಮಗು ಖರೀದಿಸಬಹುದು ಎಂದು ಲಿನೆಟ್ ಹೇಳಿದ್ದಳು.
ಆದ್ದರಿಂದ ಕ್ಲಿನಿಕ್ನಿಂದಲೇ ಮಗುವನ್ನು ಖರೀದಿಸುವ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ಕಮಿಷನರ್ ಸೂಚನೆಯೆ ಮೇರೆಗೆ ಪೊಲೀಸ್ ಕಾನ್ಸ್ಟೇಬಲ್ ಇರ್ಫಾನ್ ಕೂಡ ಕಾರ್ಯಾಚರಣೆಯ ಭಾಗವಾಗಿದ್ದರು. ಕೊನೆಗೆ 90 ಸಾವಿರ ರೂ.ಗಳನ್ನು ಕೊಟ್ಟು ಮಗುವನ್ನು ಪಡೆದುಕೊಳ್ಳುವಷ್ಟರಲ್ಲಿ ಲಿನೆಟ್ಳನ್ನು ಅಲ್ಲೇ ಇದ್ದ ಪೊಲೀಸರು ಬಂಧಿಸಿ, ಆಕೆಯ ಬಳಿ ಇದ್ದ ಎಲ್ಲಾ ನಕಲಿ ಸರ್ಟಿಫಿಕೇಟ್, ಎಟಿಎಂ ಕಾರ್ಡ್ಗಳು, ದೆಹಲಿ ವಿಳಾಸದ ನಕಲಿ ವಿಸಿಟಿಂಗ್ ಕಾರ್ಡ್ಗಳು, ಮಗುವಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಂಗವ್ವಳ ಮಗುವೆಂದು ದಾಖಲೆಗಳ ಸಹಿತ ನಿರೂಪಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಲಿನೆಟ್ಗೆ ಸಹಕರಿಸಿದ ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಮೇಲೂ ಕ್ರಮ ಕೈಗೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ 94,325 ರೂ. ಹಾಗೂ ಆರೋಪಿತೆ ಲಿನೆಟಾ ವೇಗಸ್ಳ ೫ ಮೊಬೈಲ್ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಮಾಡಲಾಗಿತ್ತು. ಆದರೆ ಆ ಬಳಿಕ 94,325 ರೂ. ಹಾಗೂ 5 ಮೊಬೈಲ್ಗಳನ್ನು ಆರೋಪಿತೆ ಲಿನೆಟಾ ವೇಗಸ್ ಮಧ್ಯಂತರ ವಶಕ್ಕೆ ಪಡೆದುಕೊಂಡಿದ್ದಳು. ಇದೀಗ ಅದನ್ನು ಜುಲೈ 31ರೊಳಗೆ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶ ಮಾಡಲಾಗಿದೆ.
ಈ ಪ್ರಕರಣದ ತನಿಖೆಯನ್ನು ಆಗಿನ ಉಳ್ಳಾಲದ ಪಿ.ಎಸ್.ಐ ರಮೇಶ್.ಹೆಚ್. ಹಾನಪುರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಅಭಿಯೋಜನೆ 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದಾರೆ.