ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರವೇ ಬಂದಿಲ್ಲ: ಶಾಸಕ ಕಾಮತ್

ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರವೇ ಬಂದಿಲ್ಲ: ಶಾಸಕ ಕಾಮತ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದಾಗಿರುವ ಹಾನಿ, ಕೈಗೊಂಡ ಪರಿಹಾರ ಕ್ರಮ, ಸೇರಿದಂತೆ ಜನಸಾಮಾನ್ಯರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಬಾರಿಯ ಪ್ರಕೃತಿ ವಿಕೋಪದಿಂದಾಗಿ ನಗರದ ಹಲವೆಡೆ ರಸ್ತೆ, ಚರಂಡಿ, ರಾಜ ಕಾಲುವೆ, ತಡೆಗೋಡೆಗಳಿಗೆ ವಿಪರೀತ ಹಾನಿಯಾಗಿದೆ. ಕಾನೂನಾತ್ಮಕವಾಗಿ ತಡೆಗೋಡೆಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲದಿದ್ದರೂ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 25 ರಿಂದ 50 ಕೋಟಿವರೆಗೂ ಅನುದಾನವನ್ನು ತಂದು ನಗರದಲ್ಲಿ ಪರಿಹಾರ ಕಾರ್ಯ ನಡೆಸಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಅನುದಾನವನ್ನೇ (ಎಸ್.ಎಫ್.ಸಿ) ನೀಡಿಲ್ಲ. ಅಲ್ಲದೇ ಈ ಹಿಂದಿನ ಮಳೆ ಹಾನಿಯ ಪರಿಹಾರ ಧನವೂ ಬಂದಿಲ್ಲ. ಅದರ ಜೊತೆಗೆ ಈ ಬಾರಿಯ ಪರಿಹಾರದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು ಅದೂ ಸಹ ಬಾಕಿಯಾದರೆ ಕ್ಷೇತ್ರದ ಜನತೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.


ಇದೀಗ ರಾಜ್ಯ ಸರ್ಕಾರ ಮನೆಗಳಿಗೆ ಅಲ್ಪಮೊತ್ತದ ಪರಿಹಾರ ನೀಡುತ್ತಿದ್ದರೂ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆಗಳಿಗೆ ಉಂಟಾಗಿರುವ ತೀವ್ರ ಹಾನಿಯ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ಆಗಿರುವ ಹಾನಿ ಹಾಗೂ ಮುಂದೆ ಅದನ್ನು ತಡೆಗಟ್ಟುವ ಬಗ್ಗೆ ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು ಒಂದು ವಾರದೊಳಗೆ ಜಂಟಿಯಾಗಿ ವರದಿ ಸಿದ್ದಪಡಿಸುವಂತೆ ಸೂಚನೆ ನೀಡಿದ್ದೇನೆ. ನಂತರ ಅದನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಬಂದಿದ್ದಾಗ 50 ಕೋಟಿ ಅನುದಾನದ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಳೆಗಾಲ ಮುಗಿಯುತ್ತಿದ್ದಂತೆ ಸರ್ಕಾರದ ಅನುದಾನ ಹೊಂದಿಸಿಕೊಂಡು ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ, ತಾಲೂಕು ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಮ.ನ.ಪಾ. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article