
ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ: ಜು.14 ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಪ್ರತಿಭಟನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬಿಜೆಪಿ ವತಿಯಿಂದ ಜುಲೈ 14ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೆಂಪುಕಲ್ಲು, ಮರಳು ಪೂರೈಕೆ ಮಾಡುವವರು, ಕಾರ್ಮಿಕರು ಪ್ರತಿಭಟನೆ ಬೆಂಬಲಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಜಿಲ್ಲೆಯಲ್ಲಿ ಮನೆ ಸಹಿತ ಇತರ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಳೆದ ಕೆಲ ತಿಂಗಳಿನಿಂದ ಕೆಂಪುಕಲ್ಲು, ಮರಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕೆಂಪುಕಲ್ಲು, ಮರಳು ಸಾಗಾಟ ಮಾಡುವವರು, ಸಾವಿರಾರು ಮಂದಿ ಕಾರ್ಮಿಕರು, ಮೇಸಿಗಳು, ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಊಟಕ್ಕೆ ಪರದಾಡುವಂತಾಗಿದೆ. ಬಡ ಕೂಲಿ ಕಾರ್ಮಿಕರಿಗೆ ಇದರಿಂದ ತೊಂದರೆಯಾಗಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಕೆಂಪುಕಲ್ಲು, ಮರಳು ಅಕ್ರಮಕ್ಕೆ ನಮ್ಮ ಬೆಂಬಲವಿಲ್ಲ. ಅಧಿಕೃತ ಪೂರೈಕೆಗೆ ಅವಕಾಶ ನೀಡಬೇಕು. ಜನರಿಗೆ ಸಾಮಾನ್ಯ ದರದಲ್ಲಿ ಕಲ್ಲು, ಮರಳು ಸಿಗುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಈ ಸಂಬಂಧ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಯಾವುದೇ ಸಭೆ ನಡೆಸಿಲ್ಲ. ಕೇರಳದಲ್ಲಿ ಒಂದು ಟನ್ ಕೆಂಪುಕಲ್ಲಿಗೆ 32 ರೂ. ರಾಯಲ್ಟಿ ಇದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 256 ರೂ. ರಾಯಲ್ಟಿ ಇದೆ. ಬಿಜೆಪಿ ಸರಕಾರವಿದ್ದಾಗ ಜಿಲ್ಲೆಯಲ್ಲಿ 91ರೂ. ರಾಯಲ್ಟಿ ಇತ್ತು. ರಾಯಲ್ಟಿ ಅಽಕವಾದ ಕಾರಣ ಅಽಕೃತ ಪರವಾನಿಗೆಗಿಂತ ಅನಧಿಕೃತ ಹೆಚ್ಚಾಗಿದೆ. ಕೆಂಪುಕಲ್ಲು ಪರವಾನಿಗೆ ಅರ್ಜಿ ಸಲ್ಲಿಸಿದ 21 ದಿನದೊಳಗೆ ಸಿಗಬೇಕು. ಆದರೆ, ಈಗ 6 ರಿಂದ 10 ತಿಂಗಳಾದರೂ ಪರವಾನಿಗೆ ದೊರೆಯುತ್ತಿಲ್ಲ. ಕೇರಳದಲ್ಲಿ ರಾಯಲ್ಟಿ ಕಡಿಮೆಯಾದ ಕಾರಣ 100ಕ್ಕೂ ಹೆಚ್ಚು ಲಾರಿಗಳು ಜಿಲ್ಲೆಗೆ ಆಗಮಿಸುತ್ತಿತ್ತು. ಕೇರಳದಿಂದ ಕಡಿಮೆಗೆ ಬೆಲೆಗೆ ಜಿಲ್ಲೆಗೆ ಕಲ್ಲು ಪೂರೈಕೆ ಆಗುತ್ತಿತ್ತು. ಪೊಲೀಸರು ಅದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ನೀಡುತ್ತಿಲ್ಲ. ಇದರಿಂದಾಗಿ ಸಮಸ್ಯೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೆಂಪುಕಲ್ಲು, ಮರಳು ನಿಯಮ ಸರಳೀಕರಣ ಮಾಡುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಮಾಡಿಲ್ಲ. ಮರಳು, ಕೆಂಪುಕಲ್ಲು ದೊರೆಯದೆ ಕಟ್ಟಡ, ಮನೆ ನಿರ್ಮಾಣ ಅರ್ಧದಲ್ಲಿ ನಿಂತಿದೆ. ನಿಗದಿತ ಅವಧಿಗೆ ಮನೆ ಕಾಮಗಾರಿ ಪೂರ್ಣಗೊಳಿಸದೇ ಬ್ಯಾಂಕ್ ಸಾಲ ಮರುಪಾವತಿ ಮಾಡಲೂ ಸಮಸ್ಯೆಯಾಗಿದೆ. ಸರಕಾರ ಹೇಳಿಗೆ ಸೀಮಿತವಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಬೇಕು, ಕೆಂಪುಕಲ್ಲು ಪರವಾನಿಗೆ ಪಡೆಯಲು ನಿಯಮ ಸರಳೀಕರಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಾಜ್ಯ ಸರಕಾರ ಕಳೆದ ಎರಡು ವರ್ಷಗಳಿಂದ ಮರಳು ನೀತಿ ಜಾರಿಗೊಳಿಸಿಲ್ಲ. ಇದರಿಂದಾಗಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ. ಅಽಕೃತ ಪರವಾನಿಗೆ ನೀಡದ ಕಾರಣ ಅನಽಕೃತ ಮರಳು ಹಾಗೂ ಕೆಂಪುಕಲ್ಲು ಪೂರೈಕೆಯಾಗುತ್ತಿದೆ. ಸರಕಾರ ಅಧಿಕೃತ ಕೆಂಪುಕಲ್ಲು ಹಾಗೂ ಮರಳುಗಾರಿಕೆಗೆ ಅವಕಾಶ ನೀಡಲಿ ಎಂದು ಆಗ್ರಹಿಸಿದರು.
ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಸರಕಾರದ ಭ್ರಷ್ಟಾಚಾರದ ಕಾರಣದಿಂದ ಮರಳುಗಾರಿಕೆ ಹಾಗೂ ಕೆಂಪುಕಲ್ಲು ಪೂರೈಕೆಗೆ ಅಧಿಕೃತ ಪರವಾನಿಗೆ ದೊರೆಯುತ್ತಿಲ್ಲ ಅಥವಾ ವಿಳಂಬಿಸಲಾಗುತ್ತಿದೆ. ಕೇರಳ ಮಾದರಿಯಲ್ಲಿ ಇಲ್ಲಿಯೂ ಕೆಂಪುಕಲ್ಲು ಅಧಿಕೃತ ಪೂರೈಕೆಗೆ ಅವಕಾಶ ನೀಡಲಿ ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ದ.ಕ. ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಜಂಟಿ ನಿರ್ದೇಶಕರು ಇರಬೇಕಾದ ಜಾಗದಲ್ಲಿ ಸರಕಾರ ಉಪನಿರ್ದೇಶಕರನ್ನು ನೇಮಿಸಿತ್ತು. ಈಗ ಹಿರಿಯ ಭೂವಿಜ್ಞಾನಿಗೆ ಜವಾಬ್ದಾರಿ ನೀಡಲಾಗಿದೆ. ಮರಳು ಹಾಗೂ ಕೆಂಪುಕಲ್ಲು ವಿಚಾರದಲ್ಲಿ ಯಾರಿಗೆ ಹೇಳಿದರೂ ಸ್ಪಂದನೆ ಇಲ್ಲ ಎಂದು ಆಪಾದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರಿಡುವಂತೆ ನಡೆಯುತ್ತಿರುವ ಅಭಿಯಾನಕ್ಕೆ ಬಿಜೆಪಿ ಸಹಮತ ವ್ಯಕ್ತಪಡಿಸುತ್ತದೆ. ಅನಾದಿ ಕಾಲದಿಂದ ಮಂಗಳೂರು ಎಂಬ ಹೆಸರು ಚಾಲ್ತಿಯಲ್ಲಿದ್ದು, ದಕ್ಷಿಣ ಕನ್ನಡದ ಹೆಸರನ್ನು ಮಂಗಳೂರು ಎಂದು ಬದಲಾಯಿಸಬೇಕು ಎಂದು ಸತೀಶ್ ಕುಂಪಲ ಹೇಳಿದರು.
ಪುತ್ತೂರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಮನೆಗೆ ಬಿಜೆಪಿ ನಿಯೋಗ ತೆರಳಿ ಅವರ ಜತೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದೇವೆ. ಯುವತಿಗೆ ನ್ಯಾಯ ಒದಗಿಸಬೇಕಿದೆ. ಆರೋಪಿಯ ತಂದೆಗೆ ಪಕ್ಷದಿಂದ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಉತ್ತರ ಇದುವರೆಗೆ ನೀಡಿಲ್ಲ ಎಂದು ಕುಂಪಲ ತಿಳಿಸಿದರು.
ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಸಂಜಯ ಪ್ರಭು ಉಪಸ್ಥಿತರಿದ್ದರು.