
ಮೂಡುಬಿದಿರೆ: ಗುಲಾಬ್ ಭೂಷಣ ಮುನಿ, ಭಟ್ಟಾರಕ ಸ್ವಾಮೀಜಿ ಚಾತುರ್ಮಾಸ ಆರಂಭ
Wednesday, July 9, 2025
ಮೂಡುಬಿದಿರೆ: ಆಚಾರ್ಯ 108 ಗುಲಾಬ್ ಭೂಷಣ ಮುನಿಮಹಾರಾಜರ ಹಾಗೂ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆಯು ಕಳಸ ಸ್ಥಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಜೈನಮಠ ಹಾಗೂ ಮಹಾವೀರ ಭವನದಲ್ಲಿ ಆರಂಭಗೊಂಡಿತು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಮುನಿಮಹಾರಾಜರು ಮಾತನಾಡಿ, ಚಾತುರ್ಮಾಸದಿಂದ ಭಕ್ತರಿಗೂ ಮುನಿಗಳಿಗೂ ಪ್ರಯೋಜನವಾಗಲಿದೆ. ಚಾತುರ್ಮಾಸದ ಅವಧಿಯಲ್ಲಿ ವಿಶೇಷ ಆರಾಧನೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮುನಿಗಳೇ ನಾಯಕತ್ವ ವಹಿಸಿ ಮುನ್ನಡೆಸುತ್ತಾರೆ. ಭಕ್ತರಿಗೆ ಗುರುಗಳ ಅನುಗ್ರಹ ಲಭಿಸುತ್ತದೆ. ಮುನಿಗಳು ಧಾರ್ಮಿಕ ಅಧ್ಯಯನಕ್ಕೂ ಈ ಅವಧಿ ಪೂರಕವಾಗುತ್ತದೆ. ಸಮಾಜದಲ್ಲಿ ಧರ್ಮದ ಪ್ರಭಾವನೆಯಾಗುತ್ತದೆ ಎಂದರು.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಪ್ರಮುಖರಾದ ಸಂಪತ್ ಸಾಮ್ರಾಜ್ಯ, ಕಾರ್ಯಕ್ರಮದ ಸಂಚಾಲಕ ಬಾಹುಬಲಿ ಪ್ರಸಾದ್ ಮತ್ತಿತರ ಗಣ್ಯರು ಭಾಗವಹಿಸಿದರು.