ಮನೆ ಬಾಗಿಲಿಗೆ ಆರೋಗ್ಯ ಸೇವೆ-14 ರೋಗಗಳ ತಪಾಸಣೆ: ಕೈಪಿಡಿ ಬಿಡುಗಡೆ

ಮನೆ ಬಾಗಿಲಿಗೆ ಆರೋಗ್ಯ ಸೇವೆ-14 ರೋಗಗಳ ತಪಾಸಣೆ: ಕೈಪಿಡಿ ಬಿಡುಗಡೆ


ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಇವರ ಸಹಯೋಗದೊಂದಿಗೆ ಗೃಹ ಆರೋಗ್ಯ ಯೋಜನೆ ಕಾರ್ಯಾಗಾರ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವು ಮಂಗಳವಾರ  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಗೃಹ ಆರೋಗ್ಯ ಸೇವೆ ಮನೆಬಾಗಿಲಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಸಾಂಕ್ರಮಿಕ ರೋಗಗಳ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜನಸಾಮಾನ್ಯರ ಆರೋಗ್ಯ ದೃಷ್ಟಿಯಲ್ಲಿ ಸರ್ಕಾರವು ದೊಡ್ಡ ಹೆಜ್ಜೆಯನ್ನು ಇಡುವ ಮೂಲಕ ಆರೋಗ್ಯ ಸೇವೆ ಮನೆ ಬಾಗಿಲಿಗೆ  ಮುಟ್ಟಿಸುವುದರೊಂದಿಗೆ  ಸ್ವಸ್ಥ ಸಮಾಜದ ನಿರ್ಮಾಣದ ಯೋಜನೆಯನ್ನು ಜಾರಿಗೆ ತಂದಿದೆ ಎಂದು  ಹೇಳಿದರು.

ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರುಗಳ ಪಾತ್ರ ಮಹತ್ವದಾಗಿದೆ. ಜನಸಾಮಾನ್ಯರಿಗೆ ಕಾಲಕಾಲಕ್ಕೆ ಕಾಯಿಲೆಗಳ ಪರೀಕ್ಷೆ, ಚಿಕಿತ್ಸೆ, ಅನುಸರಣಾ ಚಿಕಿತ್ಸೆ, ಉತ್ತಮ ಆಹಾರ ಪದ್ಧತಿ, ಅಭ್ಯಾಸಗಳು, ವ್ಯಾಯಾಮ ಇತ್ಯಾಧಿಗಳ ಬಗ್ಗೆ ಆರೋಗ್ಯ ಅರಿವು, ತಿಳುವಳಿಕೆ ಮೂಡಿಸುವುದು ಆರೋಗ್ಯ ಇಲಾಖೆಯ ಧ್ಯೇಯವಾಗಿರಲಿ. “ನಿಮ್ಮ ಆರೋಗ್ಯ ನಮ್ಮ ಆದ್ಯತೆ” ಎಂಬ ಮಾತಿನಂತೆ ಈ ಕಾರ್ಯಕ್ರಮ ಯಶಸ್ವಿಯಾಗಿ ಜನಸಾಮಾನ್ಯರಿಗೆ ಮುಟ್ಟಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ ಮಾತನಾಡಿ, ಸರ್ಕಾರದ ಆರೋಗ್ಯ ಇಲಾಖೆಯ ಎಲ್ಲಾ ಯೋಜನೆ/ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಇಲಾಖೆಯು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಯೋಜನೆಯು ಜಿಲ್ಲೆಯ ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿಯೊಬ್ಬ ಅಧಿಕಾರಿ, ಕ್ಷೇತ್ರ ಸಿಬ್ಬಂದಿಗಳ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ಮಾತನಾಡಿ, ಈ ಕಾರ್ಯಕ್ರಮದಡಿಯಲ್ಲಿ 30 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ೧೪ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಡಯಾಬಿಟಿಕ್ ಕಿಟಿನೋಪತಿ ಇತ್ಯಾದಿಗಳ ಬಗ್ಗೆ ಪರೀಕ್ಷೆ, ಚಿಕಿತ್ಸೆಗೊಳಪಡಿಸುವ ಉದ್ದೇಶವನ್ನು ಒಳಗೊಂಡಿದೆ ಎಂದರು.

ಸುರತ್ಕಲ್  ಜಿಲ್ಲಾ ತರಬೇತಿ ಕೇಂದ್ರದ  ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್,   ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್,  ಲೇಡಿಗೋಶನ್   ಅಧೀಕ್ಷಕ ಡಾ. ದುರ್ಗಾಪ್ರಸಾದ್,  ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ಕುಡುಪು  ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಚಿರಾಗ್, ಡಾ.ಸದಾನಂದ ಪೂಜಾರಿ, ಡಾ.ಸೌಮ್ಯ, ಡಾ. ಶರತ್ಬಾಬು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article