
ಜುಲೈ 27 ರಂದು ಮಂಗಳೂರಿನಲ್ಲಿ ದ.ಕ. ಜಿಲ್ಲಾ ಮಹಿಳಾ ಸಮ್ಮೇಳನ
ಮಂಗಳೂರು: ದೇಶದ ಪುರೋಗಾಮಿ ಮಹಿಳಾ ಚಳವಳಿಯಾದ ಜನವಾದಿ ಮಹಿಳಾ ಸಂಘಟನೆಯ ಒಂಬತ್ತನೆಯ ದ.ಕ. ಜಿಲ್ಲಾ ಸಮ್ಮೇಳನವು ಜುಲೈ 27 ರಂದು ಮಂಗಳೂರು ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಿರ್ಮಿಸಿರುವ ನಾಡೋಜ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10:00 ಗಂಟೆಗೆ ಸಮ್ಮೇಳನವನ್ನು ಲೇಖಕಿ, ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ಖ್ಯಾತ ರಂಗ ಕಲಾವಿದೆ ಗೀತಾ ಸುರತ್ಕಲ್ ಸ್ವಾಗತ ಭಾಷಣ ಮಾಡಲಿದ್ದಾರೆ.
ಬರಹಗಾರರು, ಚಿಂತಕರು ಆಗಿರುವ ಚಂದ್ರಕಲಾ ನಂದಾವರ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷೆ ಫ್ಲೇವಿ ಕ್ರಾಸ್ತಾ ಅತ್ತಾವರ ಅವರು ವಹಿಸಲಿದ್ದಾರೆ. ಉದ್ಘಾಟನಾ ಗೋಷ್ಟಿಯ ತರುವಾಯ ಪ್ರತಿನಿಧಿ ಅಧಿವೇಶನ ಜರುಗಲಿದ್ದು, ಜಿಲ್ಲೆಯಲ್ಲಿ ಮಹಿಳೆಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರವಾದ ಚರ್ಚೆ ನಡೆದು, ಮುಂಬರುವ ದಿನಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ಬಲಿಷ್ಠವಾದ ಮಹಿಳಾ ಚಳುವಳಿಯನ್ನು ಕಟ್ಟಲು ನೂತನ ನಾಯಕತ್ವವೂ ಕೂಡ ಈ ಸಮ್ಮೇಳನದಲ್ಲಿ ಹೊರಹೊಮ್ಮಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.