
ಕನಾ೯ಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಗಾಯಕ ಹಸನಬ್ಬ ಕಾಟಿಪಳ್ಳ ಆಯ್ಕೆ
Thursday, July 24, 2025
ಮೂಡುಬಿದಿರೆ: 2024 ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕೊಡಮಾಡುವ ಗೌರವ ಪ್ರಶಸ್ತಿಗೆ ಖ್ಯಾತ ಗಾಯಕ, ಕವಿ ಮೂಡುಬಿದಿರೆಯ ಹಸನಬ್ಬ ಕಾಟಿಪಳ್ಳ ಅವರು ಆಯ್ಕೆಯಾಗಿದ್ದಾರೆ.
ಮೂಲತಃ ಕಾಟಿಪಳ್ಳದವರಾಗಿರುವ ಹಸನಬ್ಬ ಅವರು ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ವಾಸವಾಗಿದ್ದು ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಾವೇ ಪದ್ಯ ರಚಿಸಿ ಹಾಡುವ ಮೂಲಕ ನಾಡಿನ ಗಮನಸೆಳೆದವರು.ಬ್ಯಾರಿ ಭಾಷೆಯಲ್ಲಿ ಇವರು ಹಲವಾರು ಹಾಡುಗಳನ್ನು ಹಾಡಿದ್ದು ಕೆಲವು ಬ್ಯಾರಿ ಹಾಡುಗಳ ಸಿಡಿಯನ್ನೂ ಬಿಡುಗಡೆಗೊಳಿಸಿದ್ದರು.
ಆಶಾಕಿರಣ್ ಮೆಲೋಡೀಸ್ ಎನ್ನುವ ತಂಡವನ್ನು ಕಟ್ಟಿಕೊಂಡು ಹಿಂದೆಲ್ಲಾ ತುಳು ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ, ಸಂಗೀತ ಒದಗಿಸಿದ್ದ ಹಸನಬ್ಬ ಅವರು ಬ್ಯಾರಿ ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡ,ತುಳು,ಹಿಂದಿ ಭಾಷೆಯ ಹಾಡುಗಳನ್ನೂ ಹಾಡಿದ್ದಾರೆ.
ಹಲವು ವರ್ಷಗಳಿಂದ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿರುವ ಹಸನಬ್ಬ ಅವರನ್ನು ಆಯ್ಕೆ ಮಾಡಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 10 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್.ಅವರು ತಿಳಿಸಿದ್ದಾರೆ.