
ಕರಾವಳಿಯಲ್ಲಿ ಮುಂದುವರಿದ ರೆಡ್ ಅಲರ್ಟ್: ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ
ಮಂಗಳೂರು: ಕರಾವಳಿಯಾಧ್ಯಂತ ಗುರುವಾರ ಉತ್ತಮ ಮಳೆಯಾಗಿದ್ದು, ಐಎಂಡಿ ರೆಡ್ ಅಲರ್ಟ್ ಘೋಷಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆ ಕಾಣಿಸಿಕೊಂಡಿದ್ದು, ಶುಕ್ರವಾರವೂ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.
ಜಿಲ್ಲೆಯಲ್ಲಿ ಕಡಬ, ಪುತ್ತೂರು, ಮಂಗಳೂರು, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ, ಬಂಟ್ವಾಳ ಭಾಗದ ಎಲ್ಲ ಅಂಗನವಾಡಿ, ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಳೆಯಿಂದಾಗಿ ಹಲವು ಕಡೆಯಲ್ಲಿ ಗುಡ್ಡ ಕುಸಿತವಾಗಿ ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿತ್ತು. ಗುರುವಾರ ಬೆಳಗ್ಗೆಯಿಂದಲ್ಲೇ ಮಳೆ ಕಾಣಿಸಿಕೊಂಡಿದ್ದು, ಬಿಟ್ಟು ಬಿಡದೇ ಸಾಧಾರಣದಿಂದ ಉತ್ತಮ ಮಳೆ ನಗರ ಭಾಗ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುರಿದಿದೆ. ಇನ್ನು ಒಂದು ವಾರದ ಕಾಲ ಸಾಧಾರಣದಿಂದ ಉತ್ತಮ ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮುಂಗಾರು ಮಳೆ ಮತ್ತಷ್ಟು ವೇಗ:
ಕಳೆದ ಕೆಲವು ದಿನಗಳಿಂದ ಸಾಧಾರಣಕ್ಕಿಂತ ಉತ್ತಮ ಮಳೆಯಾಗುತ್ತಿದ್ದು, ಜು.24ರ ಬಳಿಕ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಈ ಹಿಂದೆ ಐಎಂಡಿ ಸೂಚನೆ ನೀಡಿತ್ತು. ಆದರೆ ವ್ಯತಿರಿಕ್ತ ಪರಿಣಾಮದಿಂದ ಈಗ ಮುಂಗಾರು ಮಳೆ ಮತ್ತಷ್ಟು ವೇಗವನ್ನು ಪಡೆಯುವ ಸಾಧ್ಯತೆಯಿದ್ದು,ಜು.28ರ ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಗುರುವಾರ ಮಂಗಳೂರು ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆ ದಿನವಿಡೀ ಸುರಿದಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲೂ ಉತ್ತಮ ಮಳೆಯಾಗಿದ್ದು, ಹಾನಿಯ ಪ್ರಮಾಣ ಕಡಿಮೆಯಿದ್ದು, ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಮೀನುಗಾರರಿಗೆ ಎಚ್ಚರಿಕೆ:
ಭಾರತೀಯ ಹವಾಮಾನ ಇಲಾಖೆ ನೀಡಿದ ಸೂಚನೆಯಂತೆ ಜು.26ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಕಡಲು ಪ್ರಕ್ಷುಬ್ದವಾಗಿರುತ್ತದೆ ಈ ಕಾರಣದಿಂದ ನಾಡದೋಣಿ ಮೀನುಗಾರರು ಸೇರಿದಂತೆ ಯಾರು ಕೂಡ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 55 ಮಿ.ಮೀ ಮಳೆ ಬಿದ್ದಿದೆ. ಜಿಲ್ಲೆಯಲ್ಲೆ ಅತೀ ಹೆಚ್ಚು ಮೂಡಬಿದ್ರೆಯಲ್ಲಿ 70.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 54.7, ಬಂಟ್ವಾಳದಲ್ಲಿ 62.5, ಮಂಗಳೂರು 63.4, ಪುತ್ತೂರು 42.9, ಸುಳ್ಯ 41.5, ಮೂಡುಬಿದಿರೆ 70.4, ಕಡಬ 57.5, ಮೂಲ್ಕಿ 26.6, ಉಳ್ಳಾಲ 62.8, ಉಳ್ಳಾಲ 63.8 ಮಿ.ಮೀ. ಮಳೆಯಾಗಿದೆ.