ನಾರಾಯಣಗುರುಗಳು ನಡೆದಾಡಿದ ನೆಲದಲ್ಲಿ ದ್ವೇಷ, ಅಸೂಯೆ, ಅಸಹಕಾರದ ಕೇಂದ್ರ ಬಿಂದುವಾಗಿರುವುದು ಅತ್ಯಂತ ನೋವಿನ ಸಂಗತಿ: ಬಿ.ಕೆ.ಹರಿಪ್ರಸಾದ್

ನಾರಾಯಣಗುರುಗಳು ನಡೆದಾಡಿದ ನೆಲದಲ್ಲಿ ದ್ವೇಷ, ಅಸೂಯೆ, ಅಸಹಕಾರದ ಕೇಂದ್ರ ಬಿಂದುವಾಗಿರುವುದು ಅತ್ಯಂತ ನೋವಿನ ಸಂಗತಿ: ಬಿ.ಕೆ.ಹರಿಪ್ರಸಾದ್


ಮಂಗಳೂರು: ಮಹಾನ್ ಮಾನವತಾವಾದಿ ನಾರಾಯಣಗುರುಗಳು ನಡೆದಾಡಿದ ದ.ಕ. ಕರಾವಳಿ ನೆಲದಲ್ಲಿ ದ್ವೇಷ, ಅಸೂಯೆ, ಅಸಹಕಾರದ ಕೇಂದ್ರ ಬಿಂದುವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಗಳು ಮಂಗಳೂರು ಹಾಗೂ ಶ್ರೀ ನಾರಾಯಣಗುರು  ಧರ್ಮ ಪ್ರಸರಣ ಸೇವಾ ಟ್ರಸ್ಟ್ ಮಂಗಳೂರು ಆಶ್ರಯದಲ್ಲಿ ‘ವರ್ತಮಾನ ಕಾಲಘಟ್ಟದಲ್ಲಿ ಶ್ರೀ ನಾರಾಯಣ ಗುರುಗಳ ಸಂದೇಶ - ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ  ಭಾನುವಾರ ನಗರದ ಗೋಕರ್ಣನಾಥ ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 


ಹಿಂದು ಧರ್ಮದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಲು ಹೊರಟ ಸ್ವಾಮಿ ವಿವೇಕಾನಂದರೇ ಕೇರಳ ರಾಜ್ಯ ಒಂದು ಹುಚ್ಚಾಸ್ಪತ್ರೆ ಎಂದು ತೀರ್ಮಾನಕ್ಕೆ ಬಂದಿ ದ್ದರು. ಅವರು ಸುಧಾರಣಾ ಹೋರಾಟದಿಂದ ಹಿಂದೆ ಸರಿದಾಗ ಕೇರಳವನ್ನು ದೇಶಕ್ಕೇ ಮಾದರಿ ರಾಜ್ಯವನ್ನಾಗಿ ಮಾಡಲು ನಾರಾಯಣಗುರುಗಳ ಸಾಮಾಜಿಕ ಚಳವಳಿ  ಹಾಗೂ ಪ್ರತಿಪಾದಿಸಿದ ಸಿದ್ಧಾಂತ ಎನ್ನುವುದು ಬಹುಮುಖ್ಯ. ಅದೇ ರೀತಿ ಕರಾವಳಿ ಜಿಲ್ಲೆಯನ್ನು ಕೋಮುವಾದದಿಂದ ಮುಕ್ತಗೊಳಿಸಿ ಸಹಬಾಳ್ವೆ, ಸಹೋದರತೆ ಹಾಗೂ  ಭ್ರಾತೃತ್ವದಿಂದ ಬದುಕುವಂತೆ ಮಾಡಲು ಇರುವುದು ನಾರಾಯಣ ಗುರುಗಳ ಸಂದೇಶ ಒಂದೇ ಮಾರ್ಗ. ಇದನ್ನು ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಧರ್ಮದ ಅಮಲಿ ನಿಂದ ಕರಾವಳಿ ಕೂಡ ಹುಚ್ಚಾಸ್ಪತ್ರೆ ಆಗಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ನಾರಾಯಣಗುರುಗಳು ವಿವಾಹಕ್ಕೆ ಮಾಡುವ ದುಂದುವೆಚ್ಚವನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನೀಡಿದರು. ಸಹಭೋಜನಕ್ಕೆ ಪ್ರೋತ್ಸಾಹ  ನೀಡಿದರು. ಇದಕ್ಕೆ ವಿರುದ್ಧವಾಗಿ ದ.ಕ. ಜಿಲ್ಲೆ ನಡೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದರು.

ಗುರುಜಯಂತಿ ಶಾಲೆಗಳಿಗೆ ಕಡ್ಡಾಯವಾಗಲಿ:

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ವಿಚಾರಗಳಿಗೆ ಅಸ್ಪೃಶ್ಯರು, ಹಿಂದುಳಿದವರಿಗೆ ಸ್ಥಾನಮಾನ  ಸಿಗಬೇಕು ಎಂದು ಹೋರಾಡಿದವರು ನಾರಾಯಣಗುರುಗಳ ಅವರ ಹೋರಾಟ ಸಂಘರ್ಷ ರಹಿತವಾಗಿತ್ತು. ಗುರುಗಳ ವಿಚಾರಧಾರೆ, ತತ್ವ ಸಂದೇಶಗಳ ಪಾಲನೆಯಿಂದ  ಸದೃಢ ಭಾರತ ನಿರ್ಮಾಣ ಸಾಧ್ಯ. ಗುರುಗಳ ಜಯಂತಿ ಕಾರ್ಯಕ್ರಮ ಕೇವಲ ಕಾಟಾಚಾರಕ್ಕೆ ನಡೆಯದೆ ರಾಜ್ಯದ ಎಲ್ಲ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ  ಆಚರಣೆಯಾಗಬೇಕು. ಅವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಇಂದಿನ ಬಹುತ್ವದ ಸಮಾಜದಲ್ಲಿ ಶ್ರೀಮಂತ, ಬಡವ, ನನ್ನ ಜಾತಿ ಮೇಲು  ಬೇಧಘ ಇದೆ. ಆಲೋಚನೆಗಳು ಬೇರೆ ಬೇರೆಯಾಗಿರುವ ಸಮಾಜದಲ್ಲಿ ‘ಒಂದೇ’ ಎನ್ನುವ ವಿಚಾರವನ್ನು ಹೃದಯದಲ್ಲಿ ಅಳವಡಿಸುವುದು ಕಷ್ಟ ವಾಗಿರುವಾಗ, ಮಠ-  ಮಂದಿರಗಳು ಜಾತಿ ಮೀಸಲಾತಿ ಕೊಡಿ ಎಂದು ಕೇಳುತ್ತಿರುವಾಗ ಗುರುಗಳನ್ನು ಕರೆ ತರುವ ಧೈರ್ಯ ತೋರುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ನಮ್ಮ ಆಲೋಚ ನೆ, ಕಾರ್ಯಚಟುವಟಿಕೆಯಲ್ಲಿ ಸರಳತೆ ಮತ್ತು ಶಾಂತಿ ನಮ್ಮ ಮಂತ್ರವಾದರೆ ಗುರುಗಳನ್ನು ಕರೆಯಬಹುದು. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದಡಿಯಿಡಬೇಕು ಎಂದರು.

ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಜಯರಾಜ್, ಬಿಲ್ಲವ ಸಂಘ ಕಾರ್ಕಳ ಅಧ್ಯಕ್ಷ ಪ್ರಮಲ್ ಕುಮಾರ್, ಶ್ರೀವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ  ಶೇಖರ್ ಪೂಜಾರಿ, ಡಾ. ಬಿ.ಜಿ.ಸುವರ್ಣ, ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಇದ್ದರು.

ಅಧ್ಯಯನ ಪೀಠದ ನಿರ್ದೇಶಕ ಡಾ. ಜಯರಾಜ್ ಎನ್. ಸ್ವಾಗತಿಸಿದರು. ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ವಂದಿಸಿದರು. ಪ. ಪೂ.ಕಾಲೇಜು ಉಪನ್ಯಾಸಕಿ ದಿವ್ಯಾ ನಿರೂಪಿಸಿದರು.

ವಿಚಾರ ಸಂಕಿರಣದಲ್ಲಿ ‘ಶೈಕ್ಷಣಿಕ ಪುನರುತ್ಥಾನ ಮತ್ತು ಶ್ರೀ ನಾರಾಯಣಗುರು’ ವಿಷಯದ ಕುರಿತು ವಿಶ್ರಾಂತ ಕುಲಪತಿ ಪ್ರೊ. ಕೆ.ಚಿನ್ನಪ್ಪ ಗೌಡ, ‘ಸಾಮಾಜಿಕ ಸಾಮರಸ್ಯಕ್ಕೆ ಶ್ರೀ ನಾರಾಯಣ ಗುರು ಸೂತ್ರಗಳು’ ವಿಷಯದ ಕುರಿತು ಲೇಖಕ ಬೆಂಗಳೂರಿನ ಎನ್.ಎ.ಎಂ. ಇಸ್ಮಾಯಿಲ್, ‘ಸರಳ ಧಾರ್ಮಿಕ ಅನುಷ್ಠಾನದಲ್ಲಿ ದೈವದಶಕಂ ಪ್ರಭಾವ’  ವಿಷಯದ ಕುರಿತು ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ವಿಚಾರ ಮಂಡಿಸಿದರು.‘ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು’ ವಿಷಯದ ಕುರಿತು ಮುಕ್ತ  ಸಂವಾದಲ್ಲಿ ಮೂಲ್ಕಿ ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ಚೇಳಾರು ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾರು  ಮತ್ತು ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ನಿವೃತ್ತ ಡೀನ್ ಉಮ್ಮಪ್ಪ ಪೂಜಾರಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article