
ದರಿದ್ರ ಕಾಂಗ್ರೆಸ್ ಸರ್ಕಾರ: ಸತೀಶ್ ಕುಂಪಲ
Tuesday, July 8, 2025
ಮಂಗಳೂರು: ಮಾತೆತ್ತಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ನೀಡಿದ್ದೇವೆ. ಗೃಹಲಕ್ಷ್ಮೀ ನೀಡಿದ್ದೇವೆ. ಉಚಿತ ವಿದ್ಯುತ್ ನೀಡಿದ್ದೇವೆ ಅನ್ನುತ್ತಾರೆ ಆದರೆ ರಾಜ್ಯದಲ್ಲಿ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವ ಲಾರಿ ಮಾಲೀಕರಿಗೆ ಪೆಬ್ರವರಿಯಿಂದ ಹಣ ನೀಡಿಲ್ಲ. 260 ಕೋಟಿ ರೂ. ಬಾಕಿ ಇಟ್ಟಿರುವ ದಿವಾಳಿ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪ್ರಧಾನ ಮತ್ತು ಗರೀಬಿ ಕಲ್ಯಾಣ ಅನ್ನ ಯೋಜನೆಯಿಂದ ಅಕ್ಕಿ ಬರುತ್ತಿದೆ. ಅದರಲ್ಲೂ ಸಾಗಾಟದ ಹಣ ಕೊಡಲು ಈ ಸರ್ಕಾರಕ್ಕೆ ಗತಿಯಿಲ್ಲ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಗೃಹಲಕ್ಷ್ಮೀಗೆ ಹಣ ಬಾರದೆ ಐದಾರು ತಿಂಗಳು ಆಗಿದೆ. ಫ್ರೀ, ಫ್ರೀ ಎಂದು ವಿದ್ಯುತ್‌ನ ದರ ದುಪ್ಪಟ್ಟಾಗಿದೆ. ಅದರ ಮೇಲೆ ಶೇ.10 ಪಿಂಚಣಿ ಮತ್ತು ಗ್ರಾಚ್ಯುಯಿಟಿ ಎಂದು ಜನರಿಂದಲೇ ವಸೂಲಿ ಮಾಡುತ್ತಿದ್ದಾರೆ ಎಲ್ಲಿದೆ ಗ್ಯಾರಂಟಿ ಎಂದು ಕುಂಪಲ ಪ್ರಶ್ನಿಸಿದ್ದಾರೆ.
ಸಂವೇದನ ರಹಿತ ಸರ್ಕಾರ, ದುಡಿಯುವ ವರ್ಗದವರನ್ನು ಕೊಳ್ಳೆ ಹೊಡೆಯುವ ಸರ್ಕಾರ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಸಿದ್ದರಾಮಯ್ಯ ಅವರು ಕೂಡಲೇ ಲಾರಿ ಮಾಲೀಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಗೊಳಿಸಬೇಕೆಂದು ಕುಂಪಲ ಅವರು ಪ್ರಕಟಣೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.