ಮಂಗಳೂರು ಮಹಾನಗರ ಪಾಲಿಕೆ: ಉದ್ಯಮ ಪರವಾನಗಿ-ನಕಲಿ ರಶೀದಿ ಮೂಲಕ ಭಾರೀ ವಂಚನೆ

ಮಂಗಳೂರು ಮಹಾನಗರ ಪಾಲಿಕೆ: ಉದ್ಯಮ ಪರವಾನಗಿ-ನಕಲಿ ರಶೀದಿ ಮೂಲಕ ಭಾರೀ ವಂಚನೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರಕ್ಕೆ ಹೆಸರಾಗುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ಪಾಲಿಕೆಗೆ ದಾಳಿ ಮಾಡಿ ಕಡತಗಳ ಪರಿಶೀಲಿಸಿದ ವೇಳೆ, ಹಲವಾರು ಅಕ್ರಮಗಳು ಬಯಲುಗೊಂಡಿದೆ.

ಪಾಲಿಕೆಯಲ್ಲಿ ವಹಿವಾಟು ಸರಿಯಾಗಿಲ್ಲದಿರುವುದು, ಏಜಂಟರು ಲಕ್ಷಾಂತರ ನಗದು ಹಣ ಹಿಡಿದುಕೊಂಡು ಪಾಲಿಕೆಗೆ ಬಂದಿರುವುದು ಪತ್ತೆಯಾಗಿತ್ತು. ಆ ಮೂಲಕ ಪಾಲಿಕೆಯ ಭ್ರಷ್ಟ ವ್ಯವಸ್ಥೆಯ ಮುಖ ಅನಾವರಣಗೊಂಡಿದ್ದರೆ, ಇದೀಗ ಪಾಲಿಕೆಯ ಪ್ರಮುಖ ಆದಾಯವಾಗಿರುವ ಉದ್ಯಮ ಪರವಾನಗಿ ಇನ್ನಿತರ ಪ್ರಮುಖ ತೆರಿಗೆ ನೋಂದಣಿಯಲ್ಲೂ ಭಾರೀ ವಂಚನೆ ಎಸಗುತ್ತಿರುವುದು ಬೆಳಕಿಗೆ ಬಂದಿದೆ.

ಮಂಗಳೂರು ನಗರದಲ್ಲಿ ಕೆಲವು ಉದ್ದಿಮೆ ಪರವಾನಗಿ ಮತ್ತು ಆಸ್ತಿ ತೆರಿಗೆಯ ನೋಂದಣಿ ನವೀಕರಣ ಹೆಸರಲ್ಲಿ ಏಜಂಟರು ಕಾರ್ಯ ನಿರ್ವಹಿಸುತ್ತಿದ್ದು, ಇವರು ನಕಲಿ ರಶೀದಿ ತಯಾರಿಸಿ ಪಾಲಿಕೆಗೆ ತೆರಿಗೆಯ ಹಣವನ್ನು ಕಟ್ಟದೆ ವಂಚನೆ ಎಸಗುತ್ತಿರುವುದು ಬಯಲಾಗಿದ್ದು, ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ವೇಳೆ, ಪಾಲಿಕೆಯ ಹೆಸರಲ್ಲಿ ಉದ್ದಿಮೆ ಪರವಾನಗಿ ನವೀಕರಣದ ಬಗ್ಗೆ ನಕಲಿ ಪ್ರಮಾಣಪತ್ರಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ.

ವ್ಯಾಪಾರದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಪಾಲಿಕೆಗೆ ತೆರಳಿ ಲೈಸನ್ಸ್ ನವೀಕರಣ ಇತ್ಯಾದಿ ಮಾಡುವುದಕ್ಕೆ ಸಮಯ ಸಾಲುವುದಿಲ್ಲ ಎಂದು ಏಜಂಟರಲ್ಲೇ ಹಣ ಕೊಟ್ಟು ತೆರಿಗೆ ಪಾವತಿಸಲು ಹೇಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಏಜಂಟರು ಪಾಲಿಕೆ ಹೆಸರಲ್ಲಿ ನಕಲಿ ರಶೀದಿ ಮತ್ತು ನಕಲಿ ಲೈಸನ್ಸ್ ಅನ್ನು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸೃಷ್ಟಿಸಿಕೊಂಡಿದ್ದು, ವ್ಯಾಪಾರಸ್ಥರಲ್ಲಿ ಸಾವಿರಾರು ರೂ. ಹಣ ಪಡೆದು ನಕಲಿ ರಶೀದಿ ನೀಡಿ ಪಾಲಿಕೆಯ ಬೊಕ್ಕಸಕ್ಕೆ ಭಾರೀ ಕನ್ನ ಹಾಕಿದ್ದಾರೆ. ಸರಕಾರದ ಹೆಸರಲ್ಲಿ ಎಸಗಿರುವ ಭಾರೀ ದೊಡ್ಡ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣ ಇದಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾದರೆ ಅಧಿಕಾರಿಗಳ ಸಹಿತ ಪಾಲಿಕೆಯಲ್ಲಿ ತೂರಿಕೊಂಡಿರುವ ಬ್ರೋಕರ್, ದಲ್ಲಾಳಿಗಳ ಮುಖ ಅನಾವರಣಗೊಳ್ಳಲಿದೆ.

ಮಹಾನಗರ ಪಾಲಿಕೆಗೆ ವರ್ಷಕ್ಕೆ ಸುಮಾರು 30 ಸಾವಿರ ರೂ. ತೆರಿಗೆ ಪಾವತಿಸುತ್ತಿದ್ದ ಪಡೀಲಿನ ವ್ಯಾಪಾರಸ್ಥರೊಬ್ಬರು ವಕೀಲರ ಸಲಹೆಯಂತೆ 15 ವರ್ಷ ತೆರಿಗೆ ಕಟ್ಟಿದ ದಾಖಲೆ ಪಡೆಯಲು ಮಹಾನಗರ ಪಾಲಿಕೆಗೆ ಬಂದಾಗ, ವಂಚನೆ ಪುರಾಣ ಬಯಲಾಗಿದೆ. ಹಲವಾರು ವರ್ಷಗಳಿಂದ ಇವರ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಉದ್ಯಮಿ ಏಜಂಟನನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ತನ್ನಲ್ಲಿರುವ ರಶೀದಿಯನ್ನು ಪಾಲಿಕೆಯ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆದರೆ ಆ ಸರ್ಟಿಫಿಕೇಟ್ ನಕಲಿ ಎನ್ನುವುದನ್ನು ಅಧಿಕಾರಿಗಳು ಹೇಳುತ್ತಿದ್ದು, ಉದ್ಯಮಿ ಪೆಚ್ಚಾಗಿದ್ದಾರೆ. ಈ ರೀತಿ ಏಜಂಟರನ್ನು ನಂಬಿ ಹಲವಾರು ಉದ್ಯಮಿಗಳು ವಂಚನೆಗೆ ಒಳಗಾಗಿದ್ದು ಇವರು ಪಾಲಿಕೆ ಆಯುಕ್ತರ ಬಳಿ ತೆರಳಿ ದೂರು ನೀಡಿದ್ದಾರೆ.

ಸಂತ್ರಸ್ತ ವ್ಯಾಪಾರಿಯೊಬ್ಬರು ತೆರಿಗೆ ವಂಚನಾ ಜಾಲದ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಇದೇ ವೇಳೆ, ಪಾಲಿಕೆಯ ಕಡೆಯಿಂದಲೂ ತಪ್ಪೆಸಗಿದ ಬ್ರೋಕರುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಪಾಲಿಕೆಯ ಕಂದಾಯ ವಿಭಾಗದ ಅಇಕಾರಿಯೊಬ್ಬರು ದಲ್ಲಾಳಿಗಳಿಂದ ವಂಚನೆ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಉದ್ಯಮ ಪರವಾನಗಿ ಮತ್ತು ಆಸ್ತಿ ತೆರಿಗೆಯ ನೋಂದಣಿಯನ್ನು ಕೆಲವರು ಮಧ್ಯವರ್ತಿಗಳ ಮೂಲಕ ಮಾಡಿಸಿದ್ದು, ವಂಚನೆ ಆಗಿರುವುದು ಕಂಡುಬಂದಿದೆ. ಕಚೇರಿ ದಾಖಲೆ ಪರಿಶೀಲಿಸಿದಾಗ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವುದು ಪತ್ತೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article