ಮರಳುಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯಾಡಳಿತದಿಂದಲೇ ವಿತರಿಸಲು ಕ್ರಮಕ್ಕೆ ಆಗ್ರಹ

ಮರಳುಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯಾಡಳಿತದಿಂದಲೇ ವಿತರಿಸಲು ಕ್ರಮಕ್ಕೆ ಆಗ್ರಹ


ಬಂಟ್ವಾಳ: ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಸಾಂಪ್ರದಾಯಿಕ ಮರಳುಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯಾಡಳಿತದಿಂದಲೇ ನಡೆಸಲು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಕಡಿಮೆ ದರದಲ್ಲಿ ಸರಳವಾಗಿ ಮತ್ತು ಸರಾಗವಾಗಿ ಮರಳು ಪೂರೈಕೆ ಆಗುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳು ಸಿಗುವಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಂಟ್ವಾಳ ತಹಶೀಲ್ದಾರರ ಮೂಲಕ ಪ್ರಗತಿಪರ ದ.ಕ.ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧಿಸಿರುವುದನ್ನು ಸಂಘವು ಸ್ವಾಗತಿಸುತ್ತದೆ. ಆದರೆ ಅದರ ಜೊತೆಗೆ ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ಕೆಂಪು ಕಲ್ಲು ತೆಗೆಯಲು ಅವಕಾಶ ಮಾಡಿಕೊಡಬೇಕಾದ ಆಡಳಿತ ತನ್ನ ಜವಾಬ್ದಾರಿಯಿಂದ ನಯಣುಚಿಕೊಳ್ಳುವುದನ್ನು ಸಂಘವು ತೀವ್ರವಾಗಿ ವಿರೋಧಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮರಳು, ಕಲ್ಲುಗಣಿಗಾರಿಕೆ ನಿಷೇಧದಿಂದ ಕಟ್ಟಡ, ಮನೆ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿವೆ. ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್‌ಗಳಿಂದಲೇ ಅಧಿಕೃತವಾಗಿ ಮರಳು ದೊರೆಯಬೇಕು, ಅಧಿಕೃತ ಮರಳು ಮತ್ತು ಕೆಂಪು ಕಲ್ಲು ಪೂರೈಕೆಯಾಗದೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತೀವ್ರವಾದ ಸಮಸ್ಯೆಯನ್ನು ಎದುರಿಸಿದ್ದಾರೆ. ಆವರ ಜೀವನ ನಿರ್ವಹಣೆ ಕಷ್ಟವಾಗಿದೆ.ಹಾಗಾಗಿ ಸರಕಾರ ಶೀಘ್ರವಾಗಿ ಮಧ್ಯ ಪ್ರವೇಶಿಸಿ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಮರಳುಗಾರಿಗೆ ಮತ್ತು ಕಲ್ಲು ಗಣಿಗಾರಿಕೆಯನ್ನು ಸ್ಥಳೀಯ ಆಡಳಿತದಿಂದಲೇ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಮಣ್ಣ ವಿಟ್ಲ, ಕಾರ್ಯದರ್ಶಿ ಅಚ್ಯುತ ಕಟ್ಟೆ, ಮುಖಂಡರಾದ ರಾಜಾ ಚೆಂಡ್ತಿಮಾರ್, ರಘುರಾಮ ಪಳೇರಿ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article