
ಅಂಗನವಾಡಿ ಕೇಂದ್ರದ ಕೊಠಡಿಯ ಶಿಲನ್ಯಾಸ ನೆರವೇರಿಸಿದ ಶಾಸಕ ಕಾಮತ್
Monday, July 21, 2025
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡಿನ ಗಾಂಧಿನಗರದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರದ ಕೊಠಡಿಯ ಶಿಲನ್ಯಾಸವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ಬಳಿಕ ಅವರು ಮಾತನಾಡಿ, ಸತತ ಪ್ರಯತ್ನದ ಫಲವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 20 ಲಕ್ಷ ರೂ. ವಿಶೇಷ ಅನುದಾನದಲ್ಲಿ ಮಂಗಳೂರು ನಗರ ದಕ್ಷಿಣಕ್ಕೆ ಗಾಂಧಿನಗರ ಹಾಗೂ ಕಸಬಾ ಬೆಂಗ್ರೆಯಲ್ಲಿ ಎರಡು ಅಂಗನವಾಡಿ ಕೊಠಡಿಗಳಿಗೆ ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿಯೇ ಕಸಬಾ ಬೆಂಗ್ರೆಯಲ್ಲೂ ಶಿಲನ್ಯಾಸ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು. ಆ ಮೂಲಕ ಇಲ್ಲಿನ ಮಕ್ಕಳ ಭವ್ಯ ಭವಿಷ್ಯಕ್ಕೆ ಉತ್ತಮ ಬುನಾದಿ ಒದಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮ.ನ.ಪಾ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ, ಬಿಜೆಪಿ ಪ್ರಮುಖರಾದ ಮೋಹನ್ ಆಚಾರ್ಯ, ವಸಂತ್ ಶೇಟ್, ರಘುನಾಥ್ ಪ್ರಭು, ಗುರು ಚರಣ್, ಮುಖ್ಯ ಶಿಕ್ಷಕಿ ಶರ್ಮಿಳಾ ಡಿಸೋಜ, ಸಹ ಶಿಕ್ಷಕಿ ರಾಜೇಶ್ವರಿ ಪ್ರಭು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಕೆ.ಬಿ, ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿ ಸಂಘ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.