
ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗುವ ಹೇಳಿಕೆ ಬೇಡ: ಯು.ಟಿ. ಖಾದರ್
Monday, July 21, 2025
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಮತ್ತು ಅಸಹಜ ಸಾವುಗಳ ಪ್ರಕರಣದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಸರಕಾರ ಎಸ್ ಐಟಿಯನ್ನು ರಚಿಸಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಬಹಿರಂಗಗೊಳ್ಳಬಹುದು. ಕಾನೂನು ಪ್ರಕಾರ ಮುಂದಿನ ಕ್ರಮ ನಡೆಯುತ್ತದೆ. ಅದಕ್ಕಿಂತ ಮೊದಲೇ ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತನಿಖೆ ನಡೆಯುವವರೆಗೆ ಜನತೆ ತಾಳ್ಮೆ ಕಳೆದುಕೊಳ್ಳಬಾರದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿರುವ ಕಾರಣ ಧಾರ್ಮಿಕ ಪಾವಿತ್ರ್ಯತೆಯನ್ನು ಹೊಂದಿರುವ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ಹೇಳಿಕೆ ನೀಡುವುದರ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ತನಿಖೆ ಸಮರ್ಪಕವಾಗಿ ನಡೆಯಲು ಎಸ್‌ಐಟಿಗೆ ಎಲ್ಲರ ಸಹಕಾರ ಅಗತ್ಯ ಎನ್ನುವುದು ನನ್ನ ಅಭಿಪ್ರಾಯ ಎಂದರು.
ತನಿಖೆ ಮೊದಲೇ ಸ್ವಯಂ ತೀರ್ಪು ನೀಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗುವಂತಹ ಕೆಲಸ ನಡೆಯಬಾರದು. ಒಂದು ಸಂಸ್ಥೆಯನ್ನು ಕಟ್ಟಲು ಕಷ್ಟವಿದೆ. ಅದರ ವಿವಿಧ ಸಂಸ್ಥೆಗಳನ್ನು ಅವಲಂಬಿಸಿ ತುಂಬಾ ಜನರ ಕುಟುಂಬಗಳಿರುತ್ತವೆ. ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರು ಯಾರೇ ಇದ್ದರೂ, ಅವರ ಮೇಲೆ ಕ್ರಮವಾಗಲಿ. ಅಲ್ಲಿಯ ತನಕ ಕಾಯಬೇಕು. ಸಹಕಾರ ಕೊಡಬೇಕು ಎಂದು ಹೇಳಿದರು.