
ಅಪರಾಧ ನಿಯಂತ್ರಣಕ್ಕೆ ಕೆ-ಕೋಕಾ ಅಸ್ತ್ರ ಬಳಕೆ: ಪೊಲೀಸ್ ಆಯುಕ್ತರು
ಒಂದು ಪ್ರಕರಣದಲ್ಲಿ ಆರೋಪಿ ಯಾಗಿ ನ್ಯಾಯಾಲಯ ದಿಂದ ಜಾಮೀನು ಪಡೆದ ಬಳಿಕ ಮತ್ತೆ ಅಪರಾಧದಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಹೆಚ್ಚಾಗುತ್ತಿದ್ದು, ತಪ್ಪಿತಸ್ಥ ಭಾವನೆ ಎನ್ನುವುದು ಆರೋಪಿಗಳಲ್ಲಿ ಇಲ್ಲವಾಗಿದೆ. ಇದು ಅಪರಾಧ ಪ್ರಮಾಣ ಹೆಚ್ಚಲೂ ಕಾರಣವಾಗಿದೆ. ಆದ್ದರಿಂದ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಾಮೀನು ಸಿಗದಂತೆ ಮಾಡುವುದು ಪೊಲೀಸರ ಉದ್ದೇಶವಾಗಿದೆ.
ಆರು ಮಂದಿ ವಿರುದ್ಧ ಪ್ರಕರಣ:
ಈಗಾಗಲೇ ಆರು ಮಂದಿಯ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿದೇಶ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಬಂಧಿತರಾದ ಮುಂಬಯಿ ಮೂಲದ ಇಬ್ಬರು ಆರೋಪಿಗಳ ಮತ್ತು ಜೈಲಿನಲ್ಲಿ ಸಹ ಕೈದಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ನಾಲ್ಕು ಮಂದಿಯ ವಿರುದ್ಧ ಕೆ-ಕೋಕಾ ಪ್ರಕರಣ ದಾಖಲಾಗಿದೆ.
ಗ್ಯಾಂಗ್ ಜತೆ ಗುರುತಿಸಿಕೊಂಡರೂ ಶಿಕ್ಷೆ:
ಯಾವುದೇ ಪ್ರಕರಣ ಇಲ್ಲದೆಯೂ ಈಗಾಗಲೇ ಎರಡು ಪ್ರಕರಣಗಳಿರುವ ಆರೋಪಿಗಳ ಜತೆ ತಿರುಗುತ್ತಾ ಗುಂಪು ಕಟ್ಟಿಕೊಳ್ಳುವವರ ವಿರುದ್ಧ ಕೂಡಾ “ಮೆಂಬರ್ ಆಫ್ ಆರ್ಗನೈಸ್ಡ್ ಗ್ಯಾಂಗ್’ ಎನ್ನುವ ಸೆಕ್ಷನ್‌ನಡಿ ಕನಿಷ್ಠ 5 ವರ್ಷ ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ. ಆರೋಪಿಗಳ ಜತೆ ಇದ್ದರೂ ಕೇಸು ಬೀಳುವುದು ಖಚಿತ ಎನ್ನುತ್ತಾರೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ.
ಜಾಮೀನು ಕೂಡಾ ಸಿಗದು:
ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ತಡೆಯಲ್ಲು ರಾಜ್ಯದಲ್ಲಿ 2000ನೇ ಇಸವಿಯಲ್ಲಿ ಈ ಕಾಯ್ದೆಯನ್ನು ಜಾರಿಗೆ ಬಂದಿತು. ಕೆ-ಕೋಕಾ ಕಾಯ್ದೆಯಡಿ ಪೊಲೀಸರಿಗೆ ವಿಶೇಷ ಅಧಿಕಾರವೂ ಸಿಗುವುದರಿಂದ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟ. ಉದಾಹರಣೆಗೆ ಆರೋಪಿ ಈಗಾಗಲೇ ಮಾಡಿದ ಅಪರಾಧ ಪ್ರಕರಣಕ್ಕೆ ಗರಿಷ್ಠ 3 ವರ್ಷದ ಜೈಲು ಶಿಕ್ಷೆ ಇದೆ ಎಂದಾದರೆ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾದರೆ ಕನಿಷ್ಠ ೫ ವರ್ಷ ಜೈಲಿನಿಂದ ಜೀವಾವಧಿಯವರೆಗೂ ಶಿಕ್ಷೆ ಹೋಗಬಹುದು ಎನ್ನುತ್ತಾರೆ ಪೊಲೀಸರು.
ಒಬ್ಬ ಎರಡು ಪ್ರಕರಣದಲ್ಲಿ ಆರೋಪಿಯಾಗಿದ್ದು, ಮತ್ತೆ ಅಪರಾಧ ಕೃತ್ಯ ಮುಂದುವರಿಸಿ ಇನ್ನೊಂದು ಪ್ರಕರಣ ದಾಖಲಾದರೆ ಅದನ್ನು ಕೆ-ಕೋಕಾ ಅಡಿಯಲ್ಲಿ ದಾಖಲಿಸಲಾಗುವುದು. ಆ ಮೂಲಕ ಯಾವುದೇ ಜಾಮೀನು ಕೂಡಾ ಸಿಗದೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.