ಮನಪಾ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಠಿ: ಬಂಧನ

ಮನಪಾ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಠಿ: ಬಂಧನ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಠಿ ಮತ್ತು ವಂಚನೆ ಪ್ರಕರಣದ ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರಿನ ಉಜ್ಜೋಡಿಯ ಬೈಕ್ ಕ್ಲಿನಿಕ್ ಹತ್ತಿರದ ನಿವಾಸಿ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನ (25) ಎಂದು ಗುರುತಿಸಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್’ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾ ನಗರ ಪಾಲಿಕೆಗೆ ಭೇಟಿ ನೀಡಿದ್ದು, ಆ ಸಂದರ್ಭ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿರುತ್ತದೆ. ಆದರೆ ಬಾಲಕೃಷ್ಣ ಸುವರ್ಣ ಅವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣ ಅವರಿಂದ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನಾ ಎಂಬಾತನು 27,990 ರೂ. ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಠಿಸಿ ನೀಡಿರುವುದು ತಿಳಿದು ಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಾಲಕೃಷ್ಣ ಸುವರ್ಣ ಅವರು ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆಯನ್ನು ಸೃಷ್ಠಿಸಿ ವಂಚಿಸಿರುವ ಪೃಥ್ವಿರಾಜ್ ಶೆಟ್ಟಿ ವಿರುದ್ಧ ದೂರು ನೀಡಿ ಪ್ರಕರಣ ದಾಖಲಾಗಿತ್ತು.

ಇದರೊಂದಿಗೆ ಪಂಪ್‌ವೆಲ್‌ನಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ವರ್ಕ್ ಶಾಪ್‌ನ ಮಾಲೀಕ ದೇವಾಂಗ ಕೆ. ಪಟೇಲ್ ಅವರು ಕೂಡಾ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನ ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ನಕಲಿ ಆಸ್ತಿ ತೆರಿಗೆಯನ್ನು ಸೃಷ್ಠಿಸಿ ವಂಚಿಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿ ಕೇಸು ದಾಖಲಾಗಿತ್ತು.

ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ದೇವಾಂಗ ಕೆ. ಪಟೇಲ್ ಹಾಗೂ ಅವರ ಪರಿಚಯದ ಬಾಲಕೃಷ್ಣ ಅವರಿಗೆ ಸಂಬಂಧಿಸಿದ ಉದ್ದಿಮೆಯ 2025-26ನೇ ಸಾಲಿನ ಪರವಾನಿಗೆಯನ್ನು ನವೀಕರಣ ಮಾಡಲು ಹಾಗೂ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಮಾಡಲು ಹಣ ಪಡೆದುಕೊಂಡು ತನ್ನ ಮೊಬೈಲ್‌ನಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ MCC Trade Licence ಹಾಗೂ MCC Property Tax  ವೆಬ್‌ಸೈಟ್‌ಗೆ ಲಾಗ್‌ಇನ್ ಆಗಿ, ಉದ್ದಿಮೆ ಮಾಲಿಕರ ಮೊಬೈಲ್ OTP ಪಡೆದು, ಹಿಂದಿನ ವರ್ಷದ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆ ರಶೀದಿಯನ್ನು ಡೌನ್‌ಲೋಡ್ ಮಾಡಿ, 3rd Party ಅಪ್ಲಿಕೇಶನ್ ಮುಖಾಂತರ ದಿನಾಂಕಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಎಡಿಟ್ ಮಾಡಿ ಅದನ್ನು ಪ್ರಿಂಟ್ ಮಾಡಿ, ದೇವಾಂಗ್ ಕೆ. ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article