
ಪ್ರಕೃತಿಯೊಂದಿಗೆ ಬೆರೆಯುವ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿ : ಕಲ್ಲಡ್ಕ ವಿಠ್ಠಲ್ ನಾಯ್ಕ್
Wednesday, July 30, 2025
ಮೂಡುಬಿದಿರೆ: ಮಕ್ಕಳು ಅತೀ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಅವರಲ್ಲಿ ಬಾಲ್ಯದ ನಂಟು ಕಡಿಮೆಯಾಗಿ ನೈತಿಕತೆ ಕ್ಷೀಣಿಸುತ್ತಿದೆ ಆದ್ದರಿಂದ ಅವರಿಗೆ ಪ್ರಕೃತಿಯೊಂದಿಗೆ ಬೆರೆಯುವ ನಮ್ಮ ಪರಂಪರೆಯನ್ನು ತಿಳಿ ಹೇಳುವ ಕೆಲಸ ಹಿರಿಯರಿಂದಾಗಬೇಕು. ಆಟಿದ ಕೂಟದಂತಹ ಕಾರ್ಯಕ್ರಮಗಳಿಂದ ತುಳುನಾಡಿನ ಸಂಸ್ಕೃತಿ ಯುವಜನತೆಗೆ ಪರಿಚಯವಾಗುತ್ತದೆ ಎಂದು ಗೀತಾ ಸಾಹಿತ್ಯ ಸಂಭ್ರಮದ ರೂವಾರಿ ವಿಠಲ್ ನಾಯ್ಕ್ ಕಲ್ಲಡ್ಕ ಹೇಳಿದರು.
ಅವರು ನಾಗರಕಟ್ಟೆಯ ರುಕ್ಮಿಣಿ ವಾಸುದೇವ ರೆಸಿಡೆನ್ಸಿ ವಠಾರದಲ್ಲಿ ನಡೆದ ಆಟಿದ ಕೂಟ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ರಂಗ, ಸಿನಿಮಾ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ವಿಠಲ್ ನಾಯ್ಕ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸುಹಾಸ್ ಹಾಗೂ ಸ್ವಸ್ತಿ ಅವರನ್ನು ಗೌರವಿಸಲಾಯಿತು.
ಉದ್ಯಮಿಗಳಾದ ದಿವಾಕರ ಶೆಟ್ಟಿ ತೋಡಾರು, ಶೋಭಿತ್ ಶೆಟ್ಟಿ, ರೆಸಿಡೆನ್ಸಿ ಸೊಸೈಟಿಯ ಅಧ್ಯಕ್ಷೆ ವಿದ್ಯಾ ಕುಮಾರ್ ಭಟ್, ಕಾರ್ಯದರ್ಶಿ ಸುಪ್ರಿತಾ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಶಂಕರ್ ಕೋಟ್ಯಾನ್ ಸ್ವಾಗತಿಸಿದರು. ಸೌಮ್ಯ ನಿರೂಪಿಸಿದರು. ವಿಶ್ವ ಕುಮಾರ್ ಭಟ್ ವಂದಿಸಿದರು.