
ವೈದ್ಯರಿಂದ ನಿಸ್ವಾರ್ಥ ಸಮರ್ಪಣ ಸೇವೆ ಸಾಧ್ಯ: ಪ್ರೊ. ಡಾ. ಲಕ್ಷ್ಮೀನಾರಾಯಣ ಸಾಮಗ
ಮಂಗಳೂರು: ವೈದ್ಯೋ ನಾರಾಯಣ ಹರಿಃ ಎಂಬ ಮಾತಿನಂತೆ ವೈದ್ಯರು ತನ್ನದೇ ಆದ ಶಿಸ್ತಿನಿಂದ ಸಮಾಜದ ಸೇವೆಯೇ ಸರ್ವಜ್ಞನ ಸೇವೆ ಎಂದು ಕಾರ್ಯನಿರ್ವಹಿಸುವವರು ನಿಸ್ಪಾರ್ಥ, ಸಮರ್ಪಣ ಭಾವದವರು. ನಿಧಾನಗತಿಯ ಯಶಸ್ಸು ಮನುಷ್ಯನನ್ನು ಸಾಧನೆಯ ಉತ್ತುಂಗಕ್ಕೇರಿಸುತ್ತದೆ ಎಂದು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಲಕ್ಷ್ಮೀನಾರಾಯಣ ಸಾಮಗ ಹೇಳಿದರು.
ನಿಟ್ಟೆ ಡಾ.ಕೆ ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ನಡೆದ ವೈದ್ಯರ ದಿನ ಮತ್ತು ಪತ್ರಿಕಾದಿನ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೈದ್ಯರಾದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕು. ಆದರೆ ರೋಗ ಬರದಂತೆ ರೋಗವನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ವೈದ್ಯರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆರೋಗ್ಯ ಪ್ರಜ್ಞೆ ಬರುವಂತೆ ಮಾಡುವುದೇ ವೈದ್ಯರ ರಾಜಧರ್ಮವಾಗಬೇಕು. ವೈದ್ಯ ವೃತ್ತಿ ಎನ್ನುವುದು ನಮ್ಮ ಸಮಾಜದಲ್ಲಿ ಅತ್ಯಂತ ಗೌರವಯುತವಾದ ವೃತ್ತಿ ಆಗಿದೆ. ಮಾನವೀಯ ಸಂಬಂಧಗಳ ಮತ್ತು ನಂಬಿಕೆಯ ತಳಹದಿಯ ಮೇಲೆ ವೈದ್ಯರ ಮತ್ತು ರೋಗಿಗಳ ನಡುವಿನ ಬಾಂಧವ್ಯ ಗಟ್ಟಿಯಾಗಿ ನಿಂತಿದೆ. ಈ ನಂಬಿಕೆಯನ್ನು ಉಳಿಸಿಕೊಳ್ಳುವ ಗುರುತರ ಹೊಣೆಗಾರಿಕೆ ಎಲ್ಲ ವೈದ್ಯರ ಮೇಲೆ ಇದೆ. ವೈದ್ಯ ವೃತ್ತಿಯ ರಾಜಧರ್ಮವನ್ನು ಎತ್ತಿಹಿಡಿಯುವ ಜವಾಬ್ದಾರಿ ಎಲ್ಲ ವೈದ್ಯರಿಗಿದೆ ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಪತ್ರಿಕೆಯು ಪತ್ರಕರ್ತನ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಜನರಿಗೆ ಸತ್ಯ ಸುದ್ದಿ ತಲುಪಿಸುವ ನೆಲೆಯಿಂದ ಪತ್ರಿಕೆ ಕೆಲಸ ಮಾಡುತ್ತಿದೆ ಎಂದರು.
ಜೀವನದಲ್ಲಿ ಶಿಕ್ಷಣವೇ ಮೂಲ ಮಾನದಂಡ. ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ದಿ ಹಾಗೂ ವಿಕಸನ ಸಾಧ್ಯವಿದೆ. ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ. ಡಾ ಸಂದೀಪ್ ರೈ ಹೇಳಿದರು.
ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಪ್ರೊ. ಡಾ ಸಂದೀಪ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ.ಕೆಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ ಸಾಯಿಗೀತಾ ಅವರು ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಕುರಿತು ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮಂಚಿ ಸರ್ಕಾರಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಸುಶೀಲಾ ವಿಟ್ಲ, ವಿದ್ವಾಂಸರಾದ ಚಂದ್ರಕಲಾ ನಂದಾವರ, ಅನುವಾದಕರ ತಂಡದ ಸದಸ್ಯರು, ಮಂಚಿ ಸರ್ಕಾರಿ ಫ್ರೌಡಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಂಥಪಾಲಕ ದಾಮೋದರ್ ರ್ಪ್ರಾರ್ಥಿಸಿದರು. ಮಂಚಿ ಫ್ರೌಡಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ನಿರೂಪಿಸಿದರು. ನಿಟ್ಟೆ ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಯೋಜನಾ ಸಹಾಯಕಿ ಶ್ರುತಿ ಅಮೀನ್ ಕೆ. ವಂದಿಸಿದರು.