
ಕುದ್ಮುಲ್ ರಂಗರಾವ್ ಅವರು ಅತ್ಯಂತ ಹಿಂದುಳಿದ ವರ್ಗಗಳ ಶಿಕ್ಷಣ, ವಸತಿ ಮತ್ತು ಆತ್ಮಗೌರವಕ್ಕಾಗಿ ಶ್ರಮಿಸಿದರು: ರಜನೀಶ್ ಕಾಪಿಕಾಡ್
ಮಂಗಳೂರು: ಮಹಾತ್ಮ ಕುದ್ಮುಲ್ ರಂಗರಾವ್ ಅವರು ಮಹಾನ್ ನಾಯಕರುಗಳಲ್ಲಿ ಪ್ರಮುಖರು. ಸಮಾಜ ಸೇವಕರಾಗಿ ಮತ್ತು ದಲಿತ ಬಂಧುಗಳಿಗೆ ದುಡಿದ ಸಾಧಕರಾಗಿ. ಅವರು ಅತ್ಯಂತ ಹಿಂದುಳಿದ ವರ್ಗಗಳ ಶಿಕ್ಷಣ, ವಸತಿ ಮತ್ತು ಆತ್ಮಗೌರವಕ್ಕಾಗಿ ಶ್ರಮಿಸಿದರು ಎಂದು ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹೇಳಿದರು.
ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಗ್ರಂಥಾಲಯ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಮಂಗಳವಾರ 'ಮಹಾತ್ಮ ಕುದ್ಮುಲ್ ರಂಗರಾವ್ ಅವರ 166ನೇ ಜನ್ಮ ದಿನಾಚರಣೆ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜಯವಂತ ನಾಯಕ್ ಮಾತನಾಡಿ, ಸಮಾಜದಲ್ಲಿ ಮೂರು ತರಹದ ವ್ಯಕ್ತಿಗಳು ಇರುತ್ತಾರೆ. ಮೊದಲನೆಯವರು ತಮಗೋಸ್ಕರ ಬದುಕುವವರು, ಎರಡನೆಯವರು ಸಮಾಜಕ್ಕಾಗಿ ಬದುಕುವ ಹಾಗೆ ನಟಿಸುವವರು, ಮೂರನೆಯದಾಗಿ ಸಮಾಜಕ್ಕಾಗಿ ಬದುಕುವವರು. ಈ ಸಾಲಿಗೆ ಮಹಾತ್ಮ ಕುದ್ಮುಲ್ ರಂಗಾರವ್ ಅವರು ಸೇರುತ್ತಾರೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮತ್ತು ಕುದ್ಮುಲ್ ರಂಗರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಮಾತನಾಡಿ, 166 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹಲವಾರು ಮೌಢ್ಯಗಳ ಜಾಡಲ್ಲಿ ಸಿಲುಕಿತ್ತು. ರಂಗರಾವ್ ಅವರು ಮೊಟ್ಟಮೊದಲು ಜೀತದಾಳುಗಳನ್ನು ಜೀತದಿಂದ ಬಿಡಿಸಲು ಪ್ರಯತ್ನಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಮಕೃಷ್ಣ ಬಿ.ಎಮ್, ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಮ ಟಿ. ರೋಡನ್ ನವರ್, ಡಾ. ವೈಶಾಲಿ ಉಪಸ್ಥಿತರಿದ್ದರು.
ಗ್ರಂಥಾಪಾಲಕಿ ಡಾ. ವನಜಾ ಸ್ವಾಗತಿಸಿ, ದ್ವಿತೀಯ ಎಂ.ಎ. ಅರ್ಥಶಾಸ್ತ್ರ ವಿಭಾಗ ವಿದ್ಯಾರ್ಥಿ ಶಿವಪ್ರಸಾದ್ ಬೋಳಂತೂರು ನಿರೂಪಿಸಿದರು. ಪ್ರಥಮ ಎಂ.ಎ. ವಿದ್ಯಾರ್ಥಿನಿ ಶ್ರೀಮೇಧ ಪ್ರಾರ್ಥಿಸಿ, ದ್ವಿತೀಯ ಎಂ.ಎ. ವಿದ್ಯಾರ್ಥಿನಿ ಹರ್ಷಪ್ರಭ ವಂದಿಸಿದರು.