ಮಂಗಳೂರು ಕೆಎಸ್‌ಆರ್‌ಟಿಸಿ ಮೇಲ್ದರ್ಜೆಗೆ ಏರಿಸುವ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಮೇಲ್ದರ್ಜೆಗೇರಿಸುವ ಆವಶ್ಯಕತೆ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಎರಡು ನೂತನ ವೋಲ್ವೊ ಮಲ್ಟಿ ಅಕ್ಸೆಲ್ ಸೀಟರ್ ಹಾಗೂ ಮೂರು ನೂತನ ಅಂಬಾರಿ ಉತ್ಸವ ಬಸ್‌ಗಳಿಗೆ ವಿಭಾಗದ ಬಿಜೈ ನಿಲ್ದಾಣದಲ್ಲಿ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ನಿಗಮದ ಕೆಲವು ಬಸ್ ನಿಲ್ದಾಣಗಳು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ಮಂಗಳೂರು ವಿಭಾಗದಲ್ಲಿ ಸುಮಾರು 6.5 ಎಕರೆ ಜಮೀನು ಇದ್ದು, ಇಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ತುಂಬಾ ಅವಕಾಶಗಳಿವೆ. ಈ ಕುರಿತು ಸಾರಿಗೆ ಸಚಿವರ ಜತೆ ಸಮಾಲೋಚನೆ ನಡೆಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಜನರ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದೆ. ಇಂತಹ ಪ್ರಗತಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಮುಖ್ಯ ಪಾತ್ರ ವಹಿಸಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರ ಈಗಾಗಲೇ 12,600 ಕೋಟಿ ರೂ ವೆಚ್ಚ ಮಾಡಿದೆ. ಮಹಿಳೆಯರ ಉಳಿತಾಯ ಕುಟುಂಬದ ಒಟ್ಟು ಸ್ಥಿತಿಯನ್ನು ತ್ತಮಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಮಾತನಾಡಿ, ಪ್ರಥಮ ಬಾರಿಗೆ ವಿಭಾಗದಿಂದ ಹಗಲು ವೇಳೆ ಬೆಂಗಳೂರಿಗೆ ಹವಾ ನಿಯಂತ್ರಿತ ಸ್ಲೀಪರ್ ಬಸ್ ಪರಿಚಯಿಸಲಾಗುತ್ತಿದೆ. ಈ ಹಿಂದೆ ಹಗಲು ವೇಳೆ ಎಸಿ ಸ್ಲೀಪರ್ ಇರಲಿಲ್ಲ. ಮಂಗಳೂರು-ಬೆಂಗಳೂರು ಅಂಬಾರಿ ಉತ್ಸವ ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 8.30ಕ್ಕೆ ಬೆಂಗಳೂರು ತಲುಪಲಿದೆ. ಮಂಗಳೂರು-ಬೆಂಗಳೂರು ಮಲ್ಟಿ ಅಕ್ಸೆಲ್ 2.0 ಮಂಗಳೂರುನಿಂದ ಬೆಳಗ್ಗೆ ಹೊರಟು ಸಂಜೆ 5.30 ಕ್ಕೆ ಬೆಂಗಳೂರು ತಲುಪಲಿದೆ ಎಂದು ಹೇಳಿದರು.
ಪುತ್ತೂರು-ಸುಳ್ಯ-ಮಡಿಕೇರಿ ಮಾರ್ಗ ಎಸಿ ಸ್ಲೀಪರ್ ಪ್ರಥಮ ಬಾರಿಗೆ ಆರಂಭಿಸಲಾಗುತ್ತಿದೆ. ನೂತನ ಮಲ್ಟಿ ಅಕ್ಸೆಲ್ ಸೀಟರ್ 2.0 ಬಸ್ ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಕಾಂಬಳಿ, ಮನಪಾ ಮಾಜಿ ಸದಸ್ಯೆ ಎಸ್.ಅಪ್ಪಿ, ಕೆಎಸ್‌ಆರ್‌ಟಿಸಿ ಡಿ ವಿಜನಲ್ ಟ್ರಾಫಿಕ್ ಆಫಿಸರ್ ಕಮಲ್ ಕುಮಾರ್, ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ನಿರ್ಮಲಾ, ಡಿಪ್ಪೋ ಮ್ಯಾನೇಜರ್ ಪ್ರೀತ ಕುಮಾರಿ, ಡಿಪ್ಪೋ 3 ಮ್ಯಾನೇಜರ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.