ಜಿಲ್ಲೆಯಲ್ಲಿ ಮರಳು ಮಾಫಿಯಾ ಹಾಗೂ ಡಿಜೆ ಹಾವಳಿಗೆ ಕಡಿವಾಣ
ಮಂಗಳೂರು: ಜಿಲ್ಲೆಯಲ್ಲಿ ಮರಳು ಮಾಫಿಯಾ ಹಾಗೂ ಡಿಜೆ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹಾಗೂ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ರವಿವಾರದಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರ ಅಹವಾಲು ಆಲಿಕೆ ಸಭೆಯಲ್ಲಿ ಅವರು ದಲಿತರ ದೂರುಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಕೆಂಪುಕಲ್ಲು, ಮರಳು ಕೊರತೆಯಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಓರ್ವರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಡಾ. ಅರುಣ್ ಕೆ. ಅವರು, ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ನಾನ್ ಸಿಆರ್‌ಝಡ್‌ನ ಮರಳು ಲಭ್ಯವಿದೆ. ಅದನ್ನು ಜಿಲ್ಲಾಡಳಿತದ ಆಪ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಆದರೆ ಕೆಲವು ಮರಳು ಮಾಫಿಯಾದವರು ಸಿಆರ್‌ಝಡ್ ಮರಳೇ ಬೇಕೆನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಎಂ-ಸ್ಯಾಂಡ್, ಹೋಲೋಬ್ಲಾಕ್‌ನಲ್ಲಿ ನಿರ್ಮಿಸಿದ ಕಟ್ಟಡಗಳು ಸುರಕ್ಷಿತವಾಗಿವೆ. ಇಲ್ಲಿ ಸಿಆರ್‌ಝಡ್ ಮರಳೇ ಬೇಕು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಮರಳು ಮಾಫಿಯಾ ಇದೆ. ಇದು ಕಪ್ಪು ಹಣದಲ್ಲಿ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಗಣೇಶೋತ್ಸವ, ಜನ್ಮಾಷ್ಟಮಿ ಮೊದಲಾದ ಉತ್ಸವಗಳನ್ನು ರಾತ್ರಿ 10.30ರೊಳಗೆ ಮುಗಿಸುವಂತೆ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿರುವುದು ಶ್ಲಾಘನೀಯ. ಡಿಜೆ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗಿರೀಶ್ ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, 10.30ರ ಅನಂತರ ಆಚರಣೆಗೆ ಅವಕಾಶವಿಲ್ಲ. ಡಿಜೆ ಬಳಕೆಗೂ ಅವಕಾಶ ನೀಡುವುದಿಲ್ಲ. ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ ಅಥವಾ 112ಗೆ ಮಾಹಿತಿ ನೀಡಬಹುದು. ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದಲಿತ ಮುಂದಾಳು ಎಸ್‌ಪಿ ಆನಂದ ಅವರು ಮಾತನಾಡಿ, ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಮಂಗಳೂರು ನಗರದಿಂದ ಯಾದವ್ ಎಂಬವರನ್ನು ಭಿಕ್ಷಾಟನೆಯ ಆರೋಪ ಹೊರಿಸಿ ಬಲವಂತವಾಗಿ ಸೇರ್ಪಡೆಗೊಳಿಸಿ ಶೋಷಣೆ, ಕಿರುಕುಳ ನೀಡಲಾಗಿದೆ. ಭಿಕ್ಷಾಟನೆ ನಡೆಸಿಲ್ಲ. ಬಿಟ್ಟುಬಿಡಿ ಎಂದು ಕೇಳಿದರೂ ಬಿಟ್ಟಿಲ್ಲ. ಒಂದು ವರ್ಷದ ಅನಂತರ ಬಿಟ್ಟಿದ್ದಾರೆ ಎಂದು ದೂರಿದರು. ಯಾದವ್ ಅವರು ಮಾತನಾಡಿ, 1 ವರ್ಷದವರೆಗೆ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ. ಒಂದು ವರ್ಷದ ಬಳಿಕ 10 ರೂ. ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಅವರು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ಹಲವೆಡೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಜಗದೀಶ್ ಪಾಂಡೇಶ್ವರ, ಗಿರೀಶ್ ಕುಮಾರ್ ಮೊದಲಾದವರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಅವರು, ಹೆಲ್ಮೆಟ್ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಸದ್ಯ ಮಳೆಗಾಲ ಇರುವುದರಿಂದ ವಾಹನಗಳನ್ನು ತಡೆದು ನಿಲ್ಲಿಸುವಾಗ ಅಪಘಾತಗಳು ಸಂಭ ವಿಸಬಹುದು ಎಂಬ ಕಾರಣಕ್ಕೆ ವಾಹನಗಳನ್ನು ತಡೆದು ನಿಲ್ಲಿಸುವ ಕಾರ್ಯಾಚರಣೆ ಕಡಿಮೆಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮಿಥುನ್ ಎಚ್.ಎನ್ ಅವರು, ಮಂಡ್ಯದಲ್ಲಿ ಇತ್ತೀಚೆಗೆ ವಾಹನ ತಡೆದು ನಿಲ್ಲಿಸಿದಾಗ ಅಪಘಾತ ಉಂಟಾದ ಅನಂತರ ವಾಹನ ತಡೆದು ದಂಡ ವಿಧಿಸುವ ಕಾರ್ಯಾಚರಣೆ ಕಡಿಮೆ ಮಾಡಲಾಗಿದೆ. ಕೆಮರಾ ಸೇರಿದಂತೆ ತಂತ್ರಜ್ಞಾನಗಳನ್ನು ಆಧರಿಸಿ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕುಡುಬಿ ಸಮುದಾಯವನ್ನು ಪರಿಶಿಷ್ಟಜಾತಿಗೆ ಸೇರಿಸುವುದಕ್ಕೆ ಪರಿಶಿಷ್ಟಜಾತಿಯವರ ವಿರೋಧವಿದೆ ಎಂದು ದಲಿತ ಮುಂದಾಳು ಎಸ್‌ಪಿ ಆನಂದ ಹಾಗೂ ಇತರ ಕೆಲವು ಮಂದಿ ದಲಿತ ಮುಂದಾಳುಗಳು ಹೇಳಿದರು. ಅವರನ್ನು ಸೇರ್ಪಡೆ ಮಾಡಿದರೆ ಪರಿಶಿಷ್ಟಜಾತಿ ಮತ್ತು ಪಂಗಡದ ಪಟ್ಟಿಯಲ್ಲಿರುವ ಜಾತಿಯವರಿಗೆ ಅನ್ಯಾಯವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಹಿರಿಯ ನಾಗರಿಕರು ಸೇರಿದಂತೆ ಸಾಮಾನ್ಯ ನಾಗರಿಕರು, ಶ್ರೀಮಂತರು ಎಲ್ಲರನ್ನು ಸಮಾನವಾಗಿ ಕಾಣಬೇಕು. ಎಲ್ಲರಿಗೂ ಉತ್ತಮ ರೀತಿಯ ಸ್ಪಂದನೆ ನೀಡಬೇಕು ಎಂದು ಗಿರೀಶ್ ಕುಮಾರ್ ಅವರು ಮನವಿ ಮಾಡಿದರು. ಜಾತಿನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಂ.ದೇವದಾಸ್ ಮನವಿ ಮಾಡಿದರು.
ಉರ್ವಸ್ಟೋರ್ ಸುಂಕದಕಟ್ಟೆಸಹಿತ ದಲಿತರ ಹಲವಾರು ಕಾಲೊನಿಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಅಳವಡಿಸಿರುವ ಸಿಸಿ ಕೆಮರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಅವುಗಳಲ್ಲಿ ದಾಖಲಾಗುವ ಮಾಹಿತಿಗಳು ಎಲ್ಲಿ ಸಂಗ್ರಹಿಸಲ್ಪಡುತ್ತವೆ ಎಂಬುದನ್ನು ಪರಿಶೀಲಿಸಬೇಕು ಎಂದು ಪ್ರಮೋದ್ ಕುಮಾರ್ ಅವರು ಮನವಿ ಮಾಡಿದರು. ಇದನ್ನು ಪೊಲೀಸ್ ಠಾಣೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್, ಡಿಸಿಆರ್‌ಇ ಇನ್ಸ್‌ಪೆಕ್ಟರ್ ವಿದ್ಯಾಧರ್ ಉಪಸ್ಥಿತರಿದ್ದರು. ಚಂದ್ರಕುಮಾರ್, ಅಮಲ ಜ್ಯೋತಿ ಮೊದಲಾದವರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.