
ಕೆಂಪುಕಲ್ಲು ಗಣಿಗಾರಿಕೆಗೆ ಕಠಿಣ ನಿಯಮ ವಿಪರ್ಯಾಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಮಯದಲ್ಲಿ ಕಟ್ಟಡ ಕಾಮಗಾರಿಗಳಿಗೆ ಬೇಕಾದ ನೈಸರ್ಗಿಕ ಸಂಪತ್ತಾದ ಮರಳು ಹಾಗೂ ಕೆಂಪುಕಲ್ಲಿನ ಸಮಸ್ಯೆ ಅಭಿವೃದ್ಧಿಗೆ ತಡೆ ಒಡ್ಡಿದೆ.
ಈ ಸಮಸ್ಯೆಗೆ ಮುಖ್ಯ ಕಾರಣವೇನೆಂದರೆ, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಮಾಡುತ್ತೇವೆ ಎಂದು ಹಲವು ವರ್ಷಗಳಿಂದ ಹೇಳುತ್ತಾ ಬಂದರೂ ಸರಕಾರದಿಂದ ಮರಳು ನೀತಿ ಆಗದಿರುವುದು. ನೈಸರ್ಗಿಕವಾಗಿ, ದೇವರ ವರದಾನವಾಗಿ ಸಿಗುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಕೆಂಪುಕಲ್ಲು ಗಣಿಗಾರಿಕೆಗೆ ಇಲಾಖೆಯವರು ಕಠಿಣ ನಿಯಮವನ್ನು ರೂಪಿಸಿರುವುದು ವಿಪರ್ಯಾಸ.
ಗುತ್ತಿಗೆದಾರರಾದ ನಾವು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಜೀವನ ಪರ್ಯಂತ ತೊಡಗಿಸಿಕೊಂಡು ಬಂದಿದ್ದೇವೆ ಹಾಗೂ ರಾಜ್ಯದ ಬೊಕ್ಕಸಕ್ಕೆ ತೆರಿಗೆಯ ರೂಪದಿಂದ ನಾವು ನಮ್ಮ ದುಡಿಮೆಯ ಪಾಲು ನೀಡುತ್ತಿದ್ದೇವೆ.
ಈ ಉದ್ಯಮವನ್ನೇ ನಂಬಿರುವ ನಮ್ಮ ಜಿಲ್ಲೆಯ ಎಲ್ಲಾ ವರ್ಗದ ಕಾರ್ಮಿಕರು ಹೊರನಾಡಿನ ಹಾಗೂ ಹೊರಜಿಲ್ಲೆಯ ಕಾರ್ಮಿಕರು ನಾವು ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಡಳಿತವು ನಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕಾಗಿ ಜಿಲ್ಲಾ ನಾಗರಿಕರ ಪರವಾಗಿ ವಿನಂತಿಸುತ್ತಿದ್ದೇವೆ. ನಮಗೆ ಸ್ವತಂತ್ರದ ದುಡಿಮೆಯನ್ನು ಮಾಡಿ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ದ. ಕ. ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.