
‘ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸಬೇಕು’: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮಂಗಳೂರು: ತಾಪಮಾನ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಕದ್ರಿಕಂಬಳ ಮಂಜುಪ್ರಾಸಾದಲ್ಲಿ ಮಂಗಳವಾರ, ಹರಿಪಾದ ಸೇರಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಗುರುವಂದನೆ, ವೃಕ್ಷ ಬೀಜ, ಸಸಿ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ವಾಹನಗಳನ್ನು ಹೊಂದಿರುವವರು ಪರಿಸರ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನ ಹೊಂದಿರುವ ಎಲ್ಲರೂ ಒಂದು ಗಿಡ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲರೂ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು. ಮನೆ, ಕಚೇರಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ (ಎಸಿ) ಹೊಂದಿರುವವರೂ ಗಿಡ ನೆಟ್ಟು ಪೋಷಣೆ ಮಾಡಬೇಕು. ಆ ಮೂಲಕ ವಾತಾವರಣ ತಂಪಾಗಿಸಲು ಕೊಡುಗೆ ನೀಡಬೇಕು ಎಂದು ಹೇಳಿದರು.
ತುಳಸಿಯ ಮಹತ್ವವನ್ನು ಶಾಸ್ತ್ರಗಳು ಹೇಳುವ ಜತೆಗೆ ಆಯುರ್ವೇದ, ಅಲೋಪತಿ ಔಷಧ ಪದ್ಧತಿಗಳೂ ತುಳಸಿಯ ಮಹತ್ವ ಸಾರಿವೆ. ಮನೆ ಮುಂದೆ ತುಳಸಿ ಗಿಡ ನೆಟ್ಟು ಬೆಳೆಸಬೇಕು. ವೃಕ್ಷದ ವೈಚಿತ್ರ್ಯ, ಜೀವನೋತ್ಸಾಹ ಮಾನವನಿಗೆ ಮಾದರಿಯಾಗಬೇಕು. ವೃಕ್ಷದ ಬದುಕುವ ಛಲ ನಮ್ಮಲ್ಲೂ ಮೂಡಬೇಕು. ಪ್ರದೀಪ ಕುಮಾರ ಕಲ್ಕೂರ ಅವರು ಪ್ರತಿವರ್ಷ ವೃಕ್ಷ ಬೀಜ, ಸಸಿ ತುಲಾಭಾರ ಆಯೋಜಿಸುತ್ತಿದ್ದು, ಮುಂದಿನ ವರ್ಷ ಕಾರ್ಯಕ್ರಮದ ಸ್ವರೂಪ ಬದಲಾಗಬೇಕು. ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಅಪರೂಪದ ಮರಗಳನ್ನು ಗುರುತಿಸಿ, ಉಳಿಸುವ ಕೆಲಸ ಆಗಬೇಕು. ಗಿಡಗಳನ್ನು ಪಡೆದು ಪೋಷಿಸಿ, ಮುಂದಿನ ವರ್ಷ ಆಗಮಿಸುವಾಗ ಗಿಡಗಳ ಜತೆ ಸೆಲ್ಫಿ ತೆಗೆದು ಫೋಟೊ ತರಬೇಕು ಎಂದರು.
ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಸೂರ್ಯನಾರಾಯಣ ಭಟ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 ಅಂಕ ಗಳಿಸಿದ ಪುತ್ತೂರು ವಿವೇಕಾನಂದ ಶಾಲೆಯ ಪ್ರಜ್ಞಾ ನಿಡ್ವಣ್ಣಾಯ ಅವರನ್ನು ಸನ್ಮಾನಿಸಲಾಯಿತು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಪ್ರಮುಖರಾದ ಡಾ.ಪಿ. ವಾಮನ ಶೆಣೈ, ಡಾ. ಹರಿಕೃಷ್ಣ ಪುನರೂರು, ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೇರಾಜೆ, ಕದ್ರಿ ನವನೀತ ಶೆಟ್ಟಿ, ಆರೂರು ಕಿಶೋರ್ ರಾವ್, ಗಜಾನನ ಪೈ, ರಾಮಚಂದ್ರ ಭಟ್, ಚಂದ್ರಶೇಖರ ಮಯ್ಯ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಡಾ.
ಐ.ಜಿ. ಭಟ್, ಸಂದೀಪ್ ಜಲನ್, ವಿನೋದ ಕಲ್ಕೂರ, ಮಂಜುಳಾ ಉಪಸ್ಥಿತರಿದ್ದರು.