ಮಹಿಳೆ ಸ್ವತಂತ್ರವಾಗಿ ಆಲೋಚಿಸದಂತೆ, ನಡೆದುಕೊಳ್ಳದಂತೆ ತಡೆಯಲಾಗುತ್ತದೆ: ಗೀತಾ ಸುರತ್ಕಲ್

ಮಹಿಳೆ ಸ್ವತಂತ್ರವಾಗಿ ಆಲೋಚಿಸದಂತೆ, ನಡೆದುಕೊಳ್ಳದಂತೆ ತಡೆಯಲಾಗುತ್ತದೆ: ಗೀತಾ ಸುರತ್ಕಲ್


ಮಂಗಳೂರು: ಮಹಿಳೆ ಇಂದು ಎಲ್ಲಾ ರೀತಿಯಲ್ಲೂ ಅಡೆತಡೆಗಳನ್ನು ಎದುರಿಸುತ್ತಿದ್ದಾಳೆ. ಕೆಲಸದ ಸ್ಥಳ ಇರಬಹುದು, ಸಾರ್ವಜನಿಕ ಜೀವನದಲ್ಲಿ ಇರಬಹುದು ಆಕೆ ಸ್ವತಂತ್ರವಾಗಿ ಆಲೋಚಿಸದಂತೆ, ನಡೆದುಕೊಳ್ಳದಂತೆ ತಡೆಯಲಾಗುತ್ತದೆ. ಇಂತಹ ಸವಾಲುಗಳನ್ನು ಮಹಿಳೆ ದಿಟ್ಟತನದಿಂದ ಎದುರಿಸಬೇಕು, ಅಂತಹ ದಿಟ್ಟತನ ಪುರೋಗಾಮಿ ಮಹಿಳಾ ಚಳವಳಿಗಳಿಂದ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವತಂತ್ರ ಚಿಂತನೆಯ ಮಹಿಳಾ ಚಳವಳಿಗಳು ಇಂದಿನ ತುರ್ತು ಅಗತ್ಯವಾಗಿದೆ ಎಂದು ಖ್ಯಾತ ರಂಗ ಕಲಾವಿದೆ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನದ ಗೌರವಾಧ್ಯಕ್ಷೆ ಗೀತಾ ಸುರತ್ಕಲ್ ಹೇಳಿದರು.


ಅವರು ಜುಲೈ 27ರಂದು ನಡೆಯಲಿರುವ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನದ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.


ಸಭೆಯಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿದ ಖ್ಯಾತ ಬರಹಗಾರ್ತಿ ಚಂದ್ರಕಲಾ ನಂದಾವರ ಮಾತನಾಡಿ, ಮಹಿಳಾ ಸಂಘಟನೆಯನ್ನು ಮಹಿಳೆಯರು ಸ್ವತಂತ್ರವಾಗಿ ಕಟ್ಟಬೇಕು, ಚಳವಳಿ ಪುರುಷ ಪ್ರಧಾನ ವ್ಯವಸ್ಥೆಯ ಕೈಯಲ್ಲಿ ಸಿಲುಕಿಕೊಳ್ಳದಂತೆ ಎಚ್ಚರ  ವಹಿಸಬೇಕು. ನಮ್ಮ ಯೌವ್ವನದ ದಿನಗಳಲ್ಲಿ ಜನವಾದಿ ಮಹಿಳಾ ಚಳವಳಿಗಳನ್ನು ಸಹಾನುಭೂತಿಯಿಂದ ನೋಡುವ, ಬೆಂಬಲಿಸುವ ಮನಸ್ಥಿತಿ ಸಮಾಜದಲ್ಲಿ ಇತ್ತು. ಇಂದು ಪ್ರತಿಗಾಮಿ ಮೌಲ್ಯಗಳು ಮೇಲುಗೈ ಸಾಧಿಸುತ್ತಿದೆ. ಸ್ವತಂತ್ರವಾಗಿ ಆಲೋಚಿಸುವ, ತಮಗೆ ಅನಿಸಿದಂತೆ ಬದುಕುವ ಮಹಿಳೆಯ ಸ್ವಾತಂತ್ರ್ಯವನ್ನು ಚಿವುಟುವ ಶಕ್ತಿಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಇಂತಹ ಬೆಳವಣಿಗೆಗಳಿಗೆ ಹಿಂಜರಿಯದೆ ಮಹಿಳೆಯರು ಸ್ವತಂತ್ರವಾಗಿ ಚಳವಳಿ ಕಟ್ಟಬೇಕು ಎಂದು ಹೇಳಿದರು.


ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷೆ ಫ್ಲೇವಿ ಕ್ರಾಸ್ತಾ ಅತ್ತಾವರ ವಹಿಸಿದ್ದರು. ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ, ಕಾರ್ಯದರ್ಶಿ ಭಾರತಿ ಬೋಳಾರ, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆ ರಾಜೇಶ್ವರಿ, ವಕೀಲರಾದ ಶಾಲಿನಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಸ್ವಾಗತ ಸಮಿತಿ ಮುಖಂಡರಾದ ಪದ್ಮಾವತಿ ಶೆಟ್ಟಿ, ಅಸುಂತಾ ಡಿಸೋಜ, ಪ್ರಮೀಳಾ ಶಕ್ತಿನಗರ, ವಿದ್ಯಾ ಶೆಣೈ, ಪ್ರಮೀಳಾ ದೇವಾಡಿಗ, ಚಂಚಲಾಕ್ಷಿ, ಗ್ರೆಟ್ಟಾ ಟೀಚರ್, ಮರ್ಲಿನ್ ರೇಗೋ, ರಶ್ಮಿ ವಾಮಂಜೂರು, ಲತಾ ಲಕ್ಷ್ಮಣ್, ಶಮೀಮಬಾನು, ಉಮೈನಾ, ಅರ್ಚನಾ ರಾಮಚಂದ್ರ, ಪೂರ್ವಿ ಶೆಟ್ಟಿ, ಪ್ರಮೋದಿನಿ, ಮೇರಿ ಗಿಬ್ಸನ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article