
ಬಹುಕೋಟಿ ವಂಚನೆ: ರೋಶನ್ ಸಲ್ಡಾನ್ಹಾ ಕೇಸ್ ಸಿಐಡಿಗೆ
ಮಂಗಳೂರು: ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಿಹಾರ ಉದ್ಯಮಿಯೊಬ್ಬರಿಗೆ 10 ಕೋಟಿ.ರೂ. ಮೋಸ ಮಾಡಿದ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು ಬುಧವಾರ ಸಿಐಡಿ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಲಿದೆ.
ಬಂಧಿತ ಬಜಾಲ್ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ್ಹಾ (43) ಪ್ರಕರಣದ ಆರೋಪಿಯಾಗಿದ್ದು, ಈತ ಶ್ರೀಮಂತರಿಗೆ, ಉದ್ಯಮಿಗಳಿಗೆ 50ಕೋಟಿ ರೂ. ವಂಚನೆ ಮಾಡಿರುವ ದಾಖಲೆ ಪೊಲೀಸರಿಗೆ ಪತ್ತೆಯಾಗಿದೆ. ಇದು ಮಾತ್ರವಲ್ಲದೆ ದೇಶದ ವಿವಿಧ ಕಡೆಯಿಂದ ಈತನ ವಂಚನಾ ಜಾಲದ ಬಗ್ಗೆ ಪೊಲೀಸರಿಗೆ ದೂರುಗಳು ಬರುತ್ತಿವೆ.
ಬಿಹಾರ ಪ್ರಕರಣ ಸಿಐಡಿಗೆ:
ಬಿಹಾರದ ಉದ್ಯಮಿಯೊಬ್ಬರಿಗೆ ರೋಶನ್ ರಿಯಲ್ ಎಸ್ಟೇಟ್ ವಿಚಾರದಲ್ಲಿ ಮೋಸ ಮಾಡಿದ ಪ್ರಕರಣವನ್ನು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದನ್ನು ಸಿಐಡಿಗೆ ವಹಿಸುವಂತೆ ಪೊಲೀಸ್ ಕಮಿಷನರ್ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ತನಿಖೆ ಸಿಐಡಿ ಒಪ್ಪಿಗೆ ಸೂಚಿಸಿದ್ದು, ತಂಡ ಮಂಗಳೂರಿಗೆ ಆಗಮಿಸಲಿದೆ.
ಸಿಐಡಿ ಕಸ್ಟಡಿಗೆ:
ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಸಿಐಡಿ ತಂಡ ಮಂಗಳೂರಿಗೆ ಬಂದ ಬಳಿಕ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆಂದು ತಿಳಿದು ಬಂದಿದೆ. ನಗರ ಪೊಲೀಸರು ಕೂಡಾ ರೋಶನ್ನನ್ನು ಕಸ್ಟಡಿಗೆ ಪಡೆಯುವ ನಿಟ್ಟಿನಲ್ಲಿ ಪೊಲೀಸರು ಪೂರಕ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ.