
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ವಿರುದ್ಧ ಕಾರ್ಯಾಚರಣೆ
ಮಂಗಳೂರು: ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಮಂಗಳವಾರ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಿತು.
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತಂಬಾಕು ಸೇವನೆ ಇದ್ದಾಗ ಕೆಟ್ಟ ಪರಿಣಾಮದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಶಾಲಾ-ಕಾಲೇಜು ಮತ್ತು ಗ್ರಾಮ ಪಂಚಾಯತ್ ಸಮನ್ವಯದೊಂದಿಗೆ ಐ.ಇ.ಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತವಾಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆ ನಿಯಂತ್ರಿಸಲು ಆರೋಗ್ಯ ಇಲಾಖೆಯ ಜೊತೆ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಪಂಚಾಯತ್ ರಾಜ್ ಇಲಾಖೆ ಸಮನ್ವಯದೊಂದಿಗೆ ತಾಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ಕೋಟ್ಪಾ ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.
ಮಂಗಳೂರು ತಾಲೂಕಿನಲ್ಲಿ ಕೋಟ್ಪಾ ಕಾಯ್ದೆಯಡಿ ಡಿಸೆಂಬರ್ 2024 ರಿಂದ ಜೂನ್ 2025 ವರೆಗೆ 87 ಪ್ರಕರಣಗಳು ದಾಖಲಾಗಿದ್ದು, ಒಟ್ಟು 22,700 ರೂ. ದಂಡ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 43 ದಡಾರ ರುಬೆಲ್ಲಾ ಸಂಶಯಾಸ್ಪದ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಹೆಚ್ಚು ಗಮನ ಹರಿಸಬೇಕು. ಜ್ವರ, ದದ್ದುಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡುವಂತೆ ಅವರು ಸೂಚಿಸಿದರು. ಲಸಿಕಾ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಮಾತನಾಡಿ, ಅತಿಸಾರ ನಿಯಂತ್ರಣ ಅಭಿಯಾನದಲ್ಲಿ ಜನರಿಗೆ ಅತಿಸಾರದ ಕಾರಣ ಚಿಕಿತ್ಸೆ ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ಕಲುಷಿತ ನೀರಿನಿಂದ ಅಥವಾ ಪಾನೀಯ ಮುಂತಾದ ಆಹಾರ ಪದಾರ್ಥಗಳ ಸೇವನೆಯಿಂದ ಸೋಂಕು ಕಾಣಿಸಿಕೊಂಡು ಮಕ್ಕಳಲ್ಲಿ ಅತಿಸಾರ ಸಮಸ್ಯೆ ಉಂಟಾಗಬಹುದು. ಅತಿಸಾರವನ್ನು ತಡೆಗಟ್ಟಲು ಮನೆಗಳಲ್ಲಿ ಒ.ಆರ್.ಎಸ್ ಇಟ್ಟುಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಅವರಿಗೆ ನೀಡಬೇಕು ಎಂದು ಅವರು ಹೇಳಿದರು.
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗೆ, ಮಂಗಳೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಉಪಸ್ಥಿತರಿದ್ದರು.