
ಯೋಗಾಸನಗಳ ಸಾಧನೆಯಿಂದ ಪ್ರತಿಯೊಂದು ಅಂಗವೂ ಸ್ಫೂರ್ತಿಯುತವೂ, ಹಗರವೂ ಆಗಿ ಆರೋಗ್ಯ ಬಲ ಲಭಿಸುತ್ತದೆ: ಸ್ವಾಮಿ ಜಿತಕಾಮಾನಂದಜೀ ಮಹಾರಾಜ್
ಮಂಗಳೂರು: ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಕಾಪಾಡುವ ಯೋಗಕ್ಕೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಠ ಸ್ಥಾನವಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ದೈನಂದಿನ ಒತ್ತಡಗಳಿಂದ ದೂರ ಉಳಿದು ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು. ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ ಎಂದು ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.
ಅವರು ಇಂದು ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆಯುವ ಎರಡು ವಾರಗಳ [ಜುಲೈ ತಿಂಗಳ-2025] ಕಾಲ ಜರುಗುವ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯೋಗಾಸನವು ಆಧುನಿಕ ಜಗತ್ತಿಗೆ ಪ್ರಾಚೀನ ಭಾರತದ ದೊಡ್ಡ ಕೊಡುಗೆಯಾಗಿದೆ. ಯೋಗಾಸನಗಳ ಸಾಧನೆಯಿಂದ ಪ್ರತಿಯೊಂದು ಅಂಗವೂ ಸ್ಫೂರ್ತಿಯುತವೂ, ಹಗರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತದೆ. ಶ್ವಾಸಕೋಶ, ಹೃದಯ ಮಸ್ತಿಷ್ಕಗಳು ಪೂರ್ಣ ವಿಕಾಸ ಹೊಂದಿ ಏಕಾಗ್ರತೆ ಉಂಟಾಗಿ ಬುದ್ಧಿ ಸೂಕ್ಷ್ಮ ಹಾಗೂ ಹೆಚ್ಚು ಚುರುಕಾಗುತ್ತದೆ. ಯೋಗಾಸನವು ದೇಹ ಮತ್ತು ಮೆದುಳನ್ನು ಆರೋಗ್ಯದಲ್ಲಿಟ್ಟು ಸರ್ವಾಂಗಗಳನ್ನೂ ಸಮಗ್ರವಾಗಿ ಶಕ್ತಿಯುತವಾಗಿ ಮಾಡುವುದರೊಂದಿಗೆ ಅಂಗಾಂಗಗಳು ಹಿಡಿತಕ್ಕೊಳಪಡುವವು. ಯೋಗಾಭ್ಯಾಸವು ದೇಹ ಮತ್ತು ಮನಸ್ಸನ್ನು ಅಭಿವೃದ್ಧಿಪಡಿಸಲು ಸಹಾಯಮಾಡುತ್ತದೆ ಎಂದರು.
ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ. ಸ್ಥಿರವಾದ ಯೋಗಾಭ್ಯಾಸ ನಿರ್ದಿಷ್ಟವಾಗಿ ಕೆಲವು ಭಂಗಿಗಳೊಂದಿಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಯೋಗವು ವ್ಯಕ್ತಿಯ ಪಂಚಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಯೋಗ ಭಂಗಿಗಳನ್ನು ನಿತ್ಯ ಅಭ್ಯಾಸ ಮಾಡಿದಾಗ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟಲು ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಸಫಲವಾಗುವುದು ಎಂದು ತಿಳಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.
ಶ್ಯಾಮ ಭಟ್, ಪೂರ್ಣಿಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇಲಂಪಾಡಿ ಶಿಷ್ಯರಾದ ಸುಮಾ, ಚಂದ್ರಹಾಸ ಬಾಳ ಹಾಗೂ ಹರಿಣಿ ಇವರು ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲಯವನ್ನು ಅಥವಾ ದೂ.ಸಂ. 0824-2414412 ಸಂಪರ್ಕಿಸಬಹುದಾಗಿದೆ.