
ಎಜುಪಾತ್ ಉಪನ್ಯಾಸ ಸರಣಿ ‘ವೃತ್ತಿಯಾಗಿ ವಾಸ್ತುಶಿಲ್ಪ’ ಕುರಿತು ಉಪನ್ಯಾಸ
ಮಂಗಳೂರು: ‘ವೃತ್ತಿಯಾಗಿ ವಾಸ್ತುಶಿಲ್ಪ’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸರಣಿ ಕಾರ್ಯಕ್ರಮ ನಡೆಯಿತು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೀಸ್ಟೋನ್ ಆರ್ಕಿಟೆಕ್ಚರ್‌ನ ದೀಪಿಕಾ ಎ. ನಾಯಕ್ ಮತ್ತು ಇಂಕ್ ಆರ್ಟಿಸ್ಟ್ ಮತ್ತು ವಾಸ್ತುಶಿಲ್ಪಿ ಅರ್. ನಿಶಿತ್ ಉರ್ವಾಲ್ ಭಾಗವಹಿಸಿದ್ದರು.
ದೀಪಿಕಾ ಎ. ನಾಯಕ್ ವಾಸ್ತುಶಿಲ್ಪದೊಳಗಿನ ವಿವಿಧ ಕ್ಷೇತ್ರಗಳ ಬಗ್ಗೆ ವಿವರಿಸಿದರು. ಅಭ್ಯಾಸ ಮಾಡುವ ವಾಸ್ತುಶಿಲ್ಪಿಯಾಗಿ ತಮ್ಮ ದೃಷ್ಟಿಕೋನವನ್ನು ಅವರು ಹಂಚಿಕೊಂಡರು. ಉದ್ಯೋಗಾವಕಾಶಗಳು, ಕೆಲಸದ ಸಾಧ್ಯತೆಗಳನ್ನು ಅವರು ವಿವರಿಸಿದರು.
ಆರ್. ನಿಶಿತ್ ಉರ್ವಾಲ್ ಅವರು ಅರ್ಹತೆ, ಪಠ್ಯಕ್ರಮ ಮತ್ತು ಇತರ ಅಗತ್ಯ ಅಂಶಗಳನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ದೃಶ್ಯ ಕಲೆಗಳು, ವಾಸ್ತುಶಿಲ್ಪ ವಿನ್ಯಾಸ, ಪರಿಕಲ್ಪನಾ ಚಿಂತನೆ, ಸಾಫ್ಟ್‌ವೇರ್ ಬಳಸುವ ೩ಆ ಮಾಡೆಲಿಂಗ್ ಮತ್ತು ಪರಿಸರ ವಿಜ್ಞಾನದ ಮಹತ್ವ ಮತ್ತು ವಾಸ್ತುಶಿಲ್ಪದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಪರಿಚಯಿಸಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ವೀರ ಜಮ್ದಾಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ ಉಪಸ್ಥಿತರಿದ್ದರು.