
ಸ್ಪಂದನೆ ನೀಡದ ಕಾಂಗ್ರೆಸ್ ಸರ್ಕಾರ: ಬಿ.ಜೆ.ಪಿ. ಹೋರಾಟ ಮುಂದುವರಿಸುವ ಎಚ್ಚರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೆಂಪು ಕಲ್ಲು ಮತ್ತು ಮರಳಿನ ಅಲಭ್ಯತೆಯಿಂದ ಮನೆ ನಿರ್ಮಾಣ ಮಾಡುವವರ ಜತೆಯಲ್ಲಿ ಲಾರಿ ಚಾಲಕರು, ಮಾಲಕರು, ಕೋರೆ ಮಾಲೀಕರು,ಕಾರ್ಮಿಕರು, ಗುತ್ತಿಗೆದಾರರು, ಮೇಸ್ತ್ರಿಗಳು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಭವಣೆ ಪಡುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಶುಲ್ಕ, ಶುಭ ಕಾರ್ಯಗಳ ವ್ಯವಸ್ಥೆ ಗಾಗಿ, ಮಾಡಿರುವ ಸಾಲಗಳ ಮರುಪಾವತಿಗಾಗಿ ದಾರಿ ಕಾಣದೆ ಕಂಗಾಲಾಗಿದ್ದಾರೆ. ಕಣ್ಣುಮುಚ್ಚಿ ಕೂತಿರುವ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಬಿ.ಜೆ.ಪಿ. ಪ್ರತಿಭಟನೆ ಮೂಲಕ ಮಾಡಿದರೂ ಸರ್ಕಾರ ಇನ್ನೂ ಕಣ್ಣು ಬಿಟ್ಟಿಲ್ಲ. ಸಮಸ್ಯೆ ಪರಿಹರಿಸುವ ಬಗ್ಗೆ ಸ್ಪಂದನೆಯೇ ನೀಡಿಲ್ಲ. ಕರ್ನಾಟಕದಲ್ಲಿರುವುದು ಬಡವರ ಹೊಟ್ಟೆ ಹೊಡೆಯುವ ಸರಕಾರ ಎಂದು ಎಂದು ಬಿಜೆಪಿ ದ. ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರು, ಸ್ಪೀಕರ್ ಕೇವಲ ಕಾಟಾಚಾರಕ್ಕಾಗಿ ಅಧಿಕಾರಿಗಳ ಸಭೆ ನಡೆಸಿದ್ದಾರೆ ವಿನಹ ಸಮಸ್ಯೆಗೆ ಪೂರ್ಣವಿರಾಮ ಹಾಕಿಲ್ಲ. ಈ ರೀತಿಯ ನಿರ್ಲಕ್ಷ್ಯ ಧೋರಣೆ ಖಂಡನೀಯ. ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿ ಕುಂಠಿತ ಗೊಳಿಸುವ ಜತೆಯಲ್ಲಿ ಜನಸಾಮಾನ್ಯರ ನೆಮ್ಮದಿ ಕೆಡಿಸಲು ಮುಂದಾಗಿರುವ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಒಂದು ವಾರದ ಒಳಗೆ ಕೆಂಪು ಕಲ್ಲು ಮತ್ತು ಮರಳಿನ ಸಮಸ್ಯೆಯನ್ನು ಸರಿಪಡಿಸದಿದ್ದರೆ ಬಿ.ಜೆ.ಪಿ. ಮತ್ತೆ ಬೀದಿಗಿಳಿದು ಉಗ್ರವಾಗಿ ಹೋರಾಟ ಮಾಡಲಿದೆ ಎಂದು ಕುಂಪಲ ರವರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.