
ಧರ್ಮಸ್ಥಳ ಪ್ರಕರಣ: ಅನಾಮಿಕ ವ್ಯಕ್ತಿ ಜತೆ ಎಸ್‌ಐಟಿ ಸ್ಥಳ ಮಹಜರು
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಿರುವೆ ಎಂದು ಅನಾಮಿಕ ದೂರುದಾರ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳ ಮುಂದೆ ಹಾಜರಾಗಿರುವ ಸಾಕ್ಷಿ ವ್ಯಕ್ತಿ ಜತೆಗೆ ಎಸ್‌ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರು ನಡೆಸಿದ್ದಾರೆ.
ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಅನುಚೇತ್, ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮುಂಜಾನೆಯೇ ಆಗಮಿಸಿದ್ದರು. ದೂರುದಾರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಿದ್ದಾನೆ. ಕೆಲವು ತಾಸು ಮಾತುಕತೆ ನಡೆಸಿದ ಬಳಿಕ ದಾಖಲೆ ಪಡೆದು ದೂರುದಾರನ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಆಗಮಿಸಿದರು.
ಸ್ನಾನಘಟ್ಟದ ಸಮೀಪವೇ ಒಂದು ಸ್ಥಳವನ್ನು ಆತ ತೋರಿಸಿದ್ದು ಅದನ್ನು ಗುರುತಿಸಿದ ಬಳಿಕ ದಟ್ಟ ಅರಣ್ಯದಲ್ಲಿ ಸುಮಾರು ಒಂದು ಗಂಟೆಯಿಂದ ಪರಿಶೀಲನೆ ಕಾರ್ಯ ನಡೆದಿದೆ.
ಈ ಕಾಡಿನ ಒಳಗೆ ಆತ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಅನುಮಾನವಿದ್ದು, ಇಲ್ಲಿ ಅಧಿಕಾರಿಗಳು ಅದನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿನ ಸ್ಥಳ ಪರಿಶೀಲನೆ ಇನ್ನಷ್ಟು ಹೊತ್ತು ಮುಂದುವರಿಯುವ ನಿರೀಕ್ಷೆಯಿದೆ.
ಈತ ಇಂದು ನೀಡುವ ಮಾಹಿತಿ ಹಾಗೂ ಗುರುತಿಸುವ ಸ್ಥಳಗಳನ್ನು ಪೊಲೀಸರು ಮಾರ್ಕ್ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆರಂಭದ ಹಂತದಲ್ಲಿ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು ಮುಂದಿನ ಹಂತದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ
ಅರಣ್ಯ ಇಲಾಖೆಯ ಜಾಗಕ್ಕೆ ಸೇರಿದ ಸ್ಥಳದಲ್ಲಿ ತಲೆ ಬರುಡೆ ಅಗೆದಿರುವ ಮಾಹಿತಿಯಿದ್ದು, ಅದೇ ಜಾಗದಲ್ಲಿ ಮಹಜರು ನಡೆಸಲಾಯಿತು. ಕಂದಾಯ ಇಲಾಖೆ, ಸರ್ವೇ ಇಲಾಖೆ, ಐ.ಎಸ್.ಡಿ. (ಅಂತರಿಕ ಭದ್ರತಾ ವಿಭಾಗ), ಎಫ್.ಎಸ್.ಎಲ್. ವಿಭಾಗದ ಸೋಕೋ ಸಿಬಂದಿ, ಅರಣ್ಯ ಇಲಾಖೆ ತಂಡ ಜತೆಗೆ ಸಹಕರಿಸಿದೆ.
ಸ್ಥಳ ಮಹಜರು ನಾಳೆಗೆ ಮುಂದೂಡಿಕೆ:
ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎಸ್ ಐ ಟಿ ಪೊಲೀಸರು, ಸೋಮವಾರ ಸಂಜೆಯ ವೇಳೆಗೆ ಸ್ಥಳ ಗುರತಿಸುವಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಮಹಜರು ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸಾಕ್ಷಿ ದೂರುದಾರನ್ನು ಮಹಜರಿಗೆ ಕರೆದೊಯ್ದ ಎಸ್ ಐ ಟಿ ಪೊಲೀಸರು, 13 ಸ್ಥಳಗಳನ್ನು ಸಾಕ್ಷಿಯ ಸಹಾಯದಿಂದ ಗುರುತಿಸಿದರು ಎಂದು ತಿಳಿದು ಬಂದಿದೆ. ಸಾಕ್ಷಿ ದೂರುದಾರನ ಜತೆ ಮೂರು ಮಂದಿ ವಕೀಲರಿದ್ದರು.