ಶಾಲೆಗಳಲ್ಲಿ ತುಳು ಪಠ್ಯ ವಿಸ್ತರಣೆಗೆ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟ ನಿರ್ಧಾರ

ಶಾಲೆಗಳಲ್ಲಿ ತುಳು ಪಠ್ಯ ವಿಸ್ತರಣೆಗೆ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟ ನಿರ್ಧಾರ


ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಹಾಗೂ ಶಾಲೆಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನವನ್ನು ನಡೆಸುವ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಜಂಟಿಯಾಗಿ ನಿರ್ಧರಿಸಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಶುಕ್ರವಾರದಂದು ಭೇಟಿ ನೀಡಿದ ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿಗಳೊಂದಿಗೆ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಶಾಲೆಗಳಲ್ಲಿ ತುಳು ಪಠ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಸಮಾಲೋಚನೆ ಸಂಧರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರು ತುಳು ಪಠ್ಯಕ್ರಮವನ್ನು ವಿಸ್ತರಿಸುವ ಬಗ್ಗೆ ಅಕಾಡೆಮಿಯು ಕೈಗೊಳ್ಳುವ ಎಲ್ಲಾ ಕೆಲಸಕಾರ್ಯದಲ್ಲಿ ತುಳು ಒಕ್ಕೂಟವು ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದರು.

ಪ್ರೌಢಶಾಲೆಗಳಲ್ಲಿ ತುಳು ಪಠ್ಯ ಬೋಧಿಸಲು ಅತಿಥಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಸರಕಾರಕ್ಕೆ ಸಲ್ಲಿಸಲಾಗಿರುವ ಮನವಿಯ ಕುರಿತಾಗಿ ಪ್ರೌಢಶಿಕ್ಷಣ ಸಚಿವರನ್ನು ಭೇಟಿ ಮಾಡಿ ಚರ್ಚಿಸುವ ಬಗ್ಗೆಯೂ ಈ ವೇಳೆ ಸಮಾಲೋಚನೆ ನಡೆಸಲಾಯಿತು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಜಾರಿಮಾಡುವ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸುವ ಬಗ್ಗೆ ಚರ್ಚಿಸಲಾಯಿತು.

ಅಕಾಡೆಮಿ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ದೇಶ ವಿದೇಶಗಳ ತುಳುಪರ ಸಂಘಟನೆಗಳ ಪ್ರತಿನಿಧಿ ಸಮಾವೇಶ ಆಯೋಜಿಸಲು ಉದ್ದೇಶಿಸಿರುವ ಬಗ್ಗೆ ಅಕಾಡೆಮಿ ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟದ ನಿಯೋಗಕ್ಕೆ ಮಾಹಿತಿ ನೀಡಿದರು.

ನಿಯೋಗದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ. ಭಂಡಾರಿ, ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಮುಂಬೈ, ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಯೋಗೀಶ್ ಶೆಟ್ಟಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಸಮಿತಿ ಸದಸ್ಯರುಗಳಾದ ಸುಧಾಕರ ಆಳ್ವ, ವಿಜಯಲಕ್ಷ್ಮಿ ಶೆಟ್ಟಿ, ಚಂದ್ರಶೇಖರ ಸುವರ್ಣ, ಮುಲ್ಕಿ ಕರುಣಾಕರ ಶೆಟ್ಟಿ, ಸೇಸಪ್ಪ ರೈ ರಾಮಕುಂಜ, ಚಂದ್ರಹಾಸ ದೇವಾಡಿಗ, ತಾರಾನಾಥ್ ಶೆಟ್ಟಿ ಬೋಳಾರ್, ಗಣೇಶ್ ಮುಲ್ಕಿ, ಪ್ರಶಾಂತ್ ಭಟ್ ಕಡಬ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article