
ಲಾಕರ್ ಕಳವು ಮಾಡಿದ ಇಬ್ಬರ ಸೆರೆ
ಮಂಗಳೂರು: ಕೊಡಿಯಾಬೈಲ್‌ನ ನ್ಯೂಟ್ರೀಶಿಯನ್ ಪ್ರಾಡಕ್ಟ್ ಮಳಿಗೆಯಿಂದ 3.30 ಲಕ್ಷ ರೂ. ನಗದು ಇದ್ದ ಲಾಕರನ್ನು ಕದ್ದೊಯ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಚಿಕ್ಕಮಗಳೂರು ಕಡೂರು ನಿವಾಸಿ, ಮಲ್ಲಿಕಟ್ಟೆಯಲ್ಲಿ ವಾಸವಿದ್ದ ಯಶವಂತ ನಾಯ್ಕ್ (19), ಶಕ್ತಿನಗರ ಕಾರ್ಮಿಕ ಕಾಲನಿ ನಿವಾಸಿ ನಿರೂಪಾದಿ ಅಲಿಯಾಸ್ ಶ್ರವಣ್ (19)ಬಂಧಿತ ಆರೋಪಿಗಳು.
ಯಶವಂತ್ ಮಳಿಗೆಯಲ್ಲಿ ಹಗಲು ಹೊತ್ತು ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ಸಂಸ್ಥೆಯಲ್ಲಿ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ ಶ್ರವಣ್ ಕೆಲ ಸಮಯದ ಹಿಂದೆ ಕೆಲಸವನ್ನು ಬಿಟ್ಟಿದ್ದ.
ಜೂ.28ರಂದು ರಾತ್ರಿ ಮಳಿಗೆಯ ಸಿಬಂದಿ ದಿನದ ವಹಿವಾಟಿನಲ್ಲಿ ಸಂಗ್ರಹವಾಗಿದ್ದ 3,33,030 ರೂ. ನಗದನ್ನು ಲಾಕರ್ನಲ್ಲಿ ಇಟ್ಟು ಬಾಗಿಲು ಮುಚ್ಚಿ ಹೋಗಿದ್ದರು. ಜೂ.30ರಂದು ಬೆಳಗ್ಗೆ ಬಂದು ನೋಡಿದಾಗ ಶಟರ್ನ ಬೀಗ ತೆರೆದ ಸ್ಥಿತಿಯಲ್ಲಿ ಇತ್ತು. ಅನುಮಾನ ಬಂದು ಒಳಗೆ ಹೋಗಿ ಪರಿಶೀಲಿಸಿದಾಗ ಲಾಕರ್ ಇರಲಿಲ್ಲ. ಈ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಿದ್ದರು.
ಕಳವಿಗೆ ಕೆಲವು ದಿನ ಮೊದಲು ಮಳಿಗೆಯ ಶಟರ್ನ ಬೀಗದ ಕೀ ಕಳೆದು ಹೋಗಿತ್ತು. ಹಾಗಾಗಿ ಅದೇ ಕೀಯನ್ನು ಬಳಸಿ ಕಳವು ಮಾಡಿರುವುದು ಸ್ಪಷ್ಟವಾಗಿತ್ತು. ತನಿಖೆ ವೇಳೆ ಈ ಇಬ್ಬರ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದ್ದು, ಆ ವೇಳೆ ಕದ್ದಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ ಲಾಕರ್ ಸಹಿತ ನಗದು, ಕೃತ್ಯಕ್ಕೆ ಉಪಯೋಗಿಸಿ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.