
ವಿಕಸಿತ್ ವಿದ್ಯಾ ಉದ್ಯೋಗ ಯೋಜನೆಗೆ ಚಾಲನೆ
ಮಂಗಳೂರು: ಸಮಾನ ಮನಸ್ಕರ ತಂಡ ಪ್ರಧಾನಮಂತ್ರಿಯವರ ‘ಸ್ಕಿಲ್ ಇಂಡಿಯಾ’ ದಿಂದ ಪ್ರೇರಣೆ ಪಡೆದು ರೂಪಿಸಿರುವ ವಿಕಸಿತ್ ವಿದ್ಯಾ ಉದ್ಯೋಗ ಕೌಶಲಾಭಿವೃದ್ಧಿ ಶಿಕ್ಷಣ ಯೋಜನೆಗೆ ಜು.7 ರಂದು ಸಂಜೆ 5ಕ್ಕೆ ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ ನೀಡಲಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಶಾಸಕ ಡಿ.ವೇದವ್ಯಾಸ ಕಾಮತ್ ಮತ್ತು ರೋಬೋ ಸಾಫ್ಟ್ ಟೆಕ್ನಾಲಜೀಸ್ 99 ಗೇಮ್ಸ್ ಸಂಸ್ಥಾಪಕ ರೋಹಿತ್ ಭಟ್ ಮುಖ್ಯ ಅತಿಥಿಗಳಾಗಿರುವರು ಎಂದು ವಿಕಸಿತ್ ವಿದ್ಯಾ ಮಾರ್ಗದರ್ಶಕ ಸಿ.ಎಸ್.ಚೇತನ್ ನಾಯಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದಿನ ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ವಿದ್ಯಾರ್ಥಿಗಳು, ಉದ್ಯೋಗಾಂಕ್ಷಿಗಳು ಮತ್ತು ವೃತ್ತಿಪರರು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಗಮನದಲ್ಲಿರಿಸಿ ವಿಕಸಿತ್ ವಿದ್ಯಾ ಉದ್ಯೋಗ ಕೌಶಲಾಭಿವೃದ್ಧಿ ಶಿಕ್ಷಣ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು ಆನ್ಸೈಟ್, ಆನ್ಲೈನ್ ಮತ್ತು ಆಫ್ಲೈನ್ ಕಾರ್ಯಾಗಾರಗಳನ್ನು ಒಳಗೊಂಡಿದೆ. ಕೇಂದ್ರದ ವತಿಯಿಂದ ಸರ್ಕಾರಿ ಕಾಲೇಜಿನ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ, ಇತರರಿಗೆ ವಿಶೇಷ ರಿಯಾಯಿತಿಯಲ್ಲಿ ಹಾಗೂ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕದಲ್ಲಿ ನಿರ್ದಿಷ್ಠ ವಿಷಯಗಳಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ ಒದಗಿಸಲಾಗುವುದು ಎಂದರು.
ಇಂದಿನ ಉದ್ಯಮದ ಆವಶ್ಯಕತೆಗಳಿಗೆ ಅನುಗುಣವಾಗಿ ಉದ್ಯಮಶೀಲತಾ ಕೌಶಲ ಅಭಿವೃದ್ಧಿಪಡಿಸಲು ‘ವರ್ಕ್ ಟು ಲರ್ನ್’ ಎಂಬ ಕಾರ್ಯಕ್ರಮ ರೂಪಿಸಲಾಗುವುದು. ತರಬೇತಿ ಸಂಬಂಽಸಿ ಮಂಗಳೂರು ವಿಶ್ವವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.
ಕೇಂದ್ರದ ಕಾರ್ಯದರ್ಶಿಗಳಾದ ಉಜ್ವಲಾ, ಸುಚಿತ್ರಾ ಉಪಸ್ಥಿತರಿದ್ದರು.