
ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯಲ್ಲಿ ವನಮಹೋತ್ಸವ
Sunday, July 20, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಬೆಳುವಾಯಿ ವಿದ್ಯಾವರ್ಧಕ ಸಂಘ, ರಿಜುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರಗಿತು.
ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಕಲ ಜೀವಸಂಕುಲಗಳನ್ನು ರಕ್ಷಿಸಬೇಕಾದ ನಾವೇ ಪರಿಸರವನ್ನು ಹಾಳು ಮಾಡುತ್ತಿರುವುದು ಖೇದಕರ ಸಂಗತಿ. ಗಿಡ ಸಸಿಗಳನ್ನು ನೆಟ್ಟು ಪರಿಸರ ಪೂರಕವಾದಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿ ಹೇಳಿದರು.
ಬೆಳವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ, ಸಂಘದ ಕಾರ್ಯದರ್ಶಿ ಗುಣಪಾಲ ಮುದ್ಯ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ ಕೆ ಭಾಗವಹಿಸಿ ಶುಭ ಹಾರೈಸಿದರು.
ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ ಮಾತನಾಡಿ, ವಿಶೇಷ ಮಕ್ಕಳ ಶಾಲೆಯಲ್ಲಿಯೇ ಪರಿಸರ ಉಳಿಸುವ, ಕಿಂಚಿತ್ತು ತ್ಯಾಜ್ಯ ಉಳಿಯದಂತೆ ಮಾಡುವ ಕಾರ್ಯಕ್ರಮ ಸಾಧ್ಯತೆ ಇರುವಾಗ ಬೇರೆ ಶಾಲೆಗಳಲ್ಲಿ ಇದರ ಎರಡು ಪಟ್ಟು ಪರಿಸರ ಉಳಿಸುವ ಕೆಲಸ ಆಗಬೇಕಿತ್ತು ಎಂದು ನುಡಿದರು.
ಕಾರ್ಕಳ ಸುರಕ್ಷಾ ಅನಾಥಾಶ್ರಮದ ಆಯಿಷಾ ಹಾಜರಿದ್ದರು.
ಶಿಕ್ಷಕಿಯರಾದ ಲಕ್ಷ್ಮಿ ಸ್ವಾಗತಿಸಿ, ನಳಿನಿ ಕಾರ್ಯಕ್ರಮ ನಿರ್ವಹಿಸಿದರು, ಸುಮನ ವಂದಿಸಿದರು.