
ಕಾಡಾನೆ ದಾಳಿ: ಕೃಷಿ ನಾಶ
ಪೆರಾಜೆ: ಪೆರಾಜೆ ಸಮೀಪದ ಬಿಳಿಯಾರು ಕೃಷಿಕರ ತೋಟಗಳಿಗೆ ಹಾಗೂ ಕಡಬ ತಾಲೂಕಿನ ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಪಾರ ಬೆಳೆಗಳ ನಾಶ ಮಾಡಿದೆ.
ಪಿ.ಬಿ. ದಿವಾಕರ ರೈ ಮತ್ತು ಸಹೋದರರ ಕೃಷಿ ಭೂಮಿಗೆ 7-8 ಆನೆಗಳಿರುವ ಹಿಂಡು ನುಗ್ಗಿ ತೆಂಗು, ಬಾಳೆ, ಅಡಿಕೆ ಮರ, ಗದ್ದೆ ಕೃಷಿಯನ್ನು ಪುಡಿಗಟ್ಟಿದೆ. 25ಕ್ಕೂ ಹೆಚ್ಚು ಫಲ ಬರುವ ತೆಂಗಿನ ಮರ, ತೆಂಗಿನ ಗಿಡಗಳು, ಹಲವಾರು ಬಾಳೆ ಗಿಡ, ಅಡಿಕೆ ಮರಗಳನ್ನು ಪುಡಿಗಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ನೇಜಿ ನೆಟ್ಟ ಗದ್ದೆಯಲ್ಲಿ ಓಡಾಡಿದ ಆನೆಗಳು ಗದ್ದೆ ಕೃಷಿಯನ್ನೂ ನಾಶ ಮಾಡಿದ್ದವು.
ಕಡಬ..
ಕಡಬ ತಾಲೂಕಿನ ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಯ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಆನೆಗಳು ಹಲವು ದಿನಗಳಿಂದ ಪಟ್ನೂರ್ ರಕ್ಷಿತಾರಣ್ಯದಲ್ಲಿ ಇದ್ದು, ರಾತ್ರಿ ಹೊತ್ತು ಬಲ್ಯ ಗ್ರಾಮದಲ್ಲಿ ಬಂದು ಕೃಷಿ ಹಾನಿ ಮಾಡುತ್ತಿವೆ. ರೈತರ ಅಕ್ರೋಶದ ಬೆನ್ನಿಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.