ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸಿನ ಜನಜಾಗೃತಿ ಸಭೆ: ಬಿಜೆಪಿ ಅಣಕ

ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸಿನ ಜನಜಾಗೃತಿ ಸಭೆ: ಬಿಜೆಪಿ ಅಣಕ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್‌ನ ಭ್ರಷ್ಟಾಚಾರ, ಬೆಲೆ ಏರಿಕೆ, ಜನವಿರೋಧಿ ನೀತಿಯ ವಿರುದ್ಧ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ಹೋರಾಟ ಪರಿಣಾಮಕಾರಿಯಾದ ಹಿನ್ನೆಲೆಯಲ್ಲಿ ಭಯದಿಂದ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಜನಜಾಗೃತಿ ಸಭೆಯನ್ನು ನಡೆಸುತ್ತಿದೆ ಎಂದು ಪುತ್ತೂರು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಆಡಳಿತದಲ್ಲಿ ತಳಮಟ್ಟದಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಯ ತನಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರೋಗ್ಯ, ವಸತಿ, ಕಾರ್ಮಿಕ ಇಲಾಖೆಗಳಲ್ಲಿ, ವಾಲ್ಮೀಕಿ ನಿಗಮ, ಅಲ್ಪಸಂಖ್ಯಾತರ ನಿಗಮ ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟನ್ನೂ ಲೂಟಿಗೈದು ಜೇಬು ತುಂಬಿಸಿಕೊಂಡು ಆಗಿದೆ.

ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುವ ನೆಪದಲ್ಲಿ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿರುವ ರೀತಿ ನೋಡಿದರೆ ಅವರ ಸಭ್ಯತೆ ಯಾವ ಮಟ್ಟದಲ್ಲಿದೆ ಎಂದು ಗೊತ್ತಾಗುತ್ತದೆ. ಶರೀರಕ್ಕೆ ಶ್ವೇತ ವಸ್ತ್ರ ಧರಿಸಿದರೆ ಸಾಲದು, ನಾಲಗೆ ಸ್ವಚ್ಛ ಇರಬೇಕು. ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರಂತಹ ನಾಯಕರನ್ನೇ ನಿಮ್ಮ ನಾಲಿಗೆಯಲ್ಲಿ ತುಚ್ಛವಾಗಿ ಮಾತನಾಡಿದ ನೀವು ಯಾವ ಸೀಮೆಯ ನಾಯಕ ಎಂದು ಜನರು ಇವತ್ತು ಕೂಡ ಹೇಳುತ್ತಿದ್ದಾರೆ. 

ಈಗ ಅಶೋಕ ರೈ ಶಾಸಕರಾದ ನಂತರ ಅವರ ಬಾಲಂಗೋಚಿಯಾಗಿ ಏನೋ ಕಾಂಗ್ರೇಸ್ ವೇದಿಕೆ ಏರುವ ಅವಕಾಶ ಸಿಕ್ಕಿದೆ ಎಂದು ಅದರ ಹುಮ್ಮಸ್ಸಿನಿಂದ ಬಿಜೆಪಿಯವರ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ನಿಲ್ಲಿಸುವುದು ಒಳಿತು. ಇಲ್ಲದಿದ್ದರೆ ನಿಮ್ಮ ಈ ಹಿಂದಿನ ರಾಜಕೀಯ ಚರಿತ್ರೆಯನ್ನು ನಾವು ಕೂಡ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article