
ಅನ್ಯಾಯ ಎದುರಿಸಲು ಪ್ರಜ್ಞಾವಂತರು ಮುಂದಾಗಬೇಕು: ಶಾಹಿದ ತಸ್ಲೀಮ್
ಪುತ್ತೂರು: ಮಹಿಳೆಯೋರ್ವಳಿಗೆ ದೌರ್ಜನ್ಯವಾದರೆ ಪ್ರಭಾವಿಗಳ ಜತೆಗೆ ಸೇರಿಕೊಂಡು ಅನ್ಯಾಯದ ಪರವಾಗಿಯೇ ನಿಲ್ಲುವ ಕೆಲಸ ನಡೆಯುತ್ತಿದೆ. ಬಿಜೆಪಿ-ಸಂಘಪರಿವಾರ ಆರೋಪಿ ಪರ ನಿಲ್ಲುತ್ತವೆ. ಇಂತಹ ಘಟನೆಗಳನ್ನು ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ಎದುರಿಸುವ ಕೆಲಸ ಮಾಡಬೇಕು ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ಲೀಮ್ ಹೇಳಿದರು.
ಅವರು ಮಂಗಳವಾರ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ರಾವ್ ಎಂಬಾತನ ಅಕ್ರಮ ಗರ್ಭ ಮತ್ತು ವಂಚನೆ ಪ್ರಕರಣದ ಸಂತ್ರಸ್ತೆಯ ಮನೆಗೆ ಭೇಟಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು.
ಸಂಘಪರಿವಾರ ಮತ್ತು ಬಿಜೆಪಿ ಬ್ರಾಹ್ಮಣ್ಯವನ್ನು ಸಂರಕ್ಷಿಸಲು ಕೆಲಸ ಮಾಡುತ್ತಿವೆ. ಬಾಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಎನ್ನುತ್ತಾರೆ. ಜಾತಿ-ಧರ್ಮ ನೋಡಿಕೊಂಡು ಮೇಲ್ವರ್ಗಕ್ಕೆ ಒಂದು ನ್ಯಾಯ ಕೆಳವರ್ಗಕ್ಕೊಂದು ನ್ಯಾಯ ಎನ್ನುವ ಪರಿಪಾಟ ಬೆಳೆದಿದೆ. ಸರ್ವೇ ಜನ ಸುಖಿನೋ ಭವಂತು. ವಸುದೈವ ಕುಟುಂಬಕಂ ಎನ್ನುವುದು ಧರ್ಮ. ಇಲ್ಲಿ ಹಿಂದುತ್ವ ಮತ್ತು ಹಿಂದು ಧರ್ಮ ಎಂಬುವುದು ಒಂದೇ ಅಲ್ಲ. ಆದರೆ ಹಿಂದುತ್ವವಾದಿಗಳು ಬ್ರಾಹ್ಮಣ್ಯದ ರಕ್ಷಣೆಗಾಗಿ ಜಾತಿ ನೋಡಿಕೊಂಡು ಇದನ್ನು ಒಂದೇ ಎಂದು ಬಿಂಬಿಸುತ್ತಿದ್ದಾರೆ. ಭೂ ಮಾತೆ. ಗೋ ಮಾತೆ, ಮಾತೆಯ ಸಂಸ್ಕೃತಿ ನಮ್ಮದು ಎಂದು ಹೇಳಿಕೊಂಡು ನೈಜಮಾತೆಗೆ ಅನ್ಯಾಯವಾದಾಗ ಪ್ರಭಾವಿಗಳ ಪರ ನಿಲ್ಲುತ್ತಾರೆ. ಪುತ್ತೂರಿನ ಈ ಘಟನೆಯಲ್ಲಿ ಸಂತ್ರಸ್ತೆಯ ತಾಯಿ ಹಿಂದುತ್ವದ ವಿವಿಧ ನಾಯಕರನ್ನು ಭೇಟಿ ಮಾಡಿದರೂ ಆಕೆಗೆ ಬೆಂಬಲ ಸಿಕ್ಕಿಲ್ಲ. ಎಸ್‌ಡಿಪಿಐ ಪ್ರತಿಭಟನೆ ಮಾಡಿದ ಬಳಿಕ ಎಲ್ಲರೂ ಎಚ್ಚೆತ್ತುಕೊಂಡರು ಎಂದು ಅವರು ಹೇಳಿದರು.
ಪುತ್ತೂರಿನ ಶಾಸಕರು ಕೇಸ್ ವಾಪಾಸು ಪಡೆದುಕೊಳ್ಳಿ ಎಂದು ಸಂತ್ರಸ್ತೆಯ ತಾಯಿಗೆ ಹೇಳಿದ್ದಾರೆ. ಹಾಗಾಗಿ ಒಂದು ಆಶಾವಾದ-ಒತ್ತಡದ ಹಿನ್ನಲೆಯಲ್ಲಿ ತಾಯಿ ಕೇಸ್ ವಾಪಾಸು ಪಡೆದುಕೊಂಡಿದ್ದಾರೆ. ಪುತ್ತೂರಿನ ಶಾಸಕರೂ ಕೂಡಾ ಬಿಜೆಪಿ ಸಂಸ್ಕೃತಿಯಲ್ಲಿ ಬೆಳೆದವರು ಎಂದು ಶಾಹಿದ ತಸ್ಲೀಮ್ ಹೇಳಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ವುಮೆನ್ ಇಂಡಿಯಾ ಮೂಮೆಂಟ್ ಝಹನ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಝೀನತ್, ಪುತ್ತೂರು ನಗರಸಭಾ ಸದಸ್ಯೆ ಝೊಹರಾ ಬನ್ನೂರು, ಜಿಲ್ಲಾ ಸಮಿತಿ ಸದಸ್ಯರಾದ ಶಿನೀರ, ಝೈನಬ, ಫೌಝಿಯಾ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಜತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಮಂಗಳೂರು ಗ್ರಾಮಾಂತರ ಜಿಲ್ಲೆ ಜೊತೆ ಕಾರ್ಯದರ್ಶಿ ಹನೀಪ್ ಪೂಜಾಲಕಟ್ಟೆ ಉಪಸ್ಥಿತರಿದ್ದರು.