
ಮಾಜಿ ಹೇಳಿಕೆ ಹಾಲಿ ತಿರುಗೇಟು..: ಅವರ ಸಾಧನೆ ಹೇಳಿದರೆ ಮನೆಯಿಂದ ಹೊರಗೆ..!
ಪುತ್ತೂರು: ಪುತ್ತೂರಿನ ಮಾಜಿ ಶಾಸಕರ ಸಾಧನೆ ಮಾದ್ಯಮಗಳ ಮೂಲಕ ಇಡೀ ಜನತೆಗೆ ಗೊತ್ತಾಗಿದೆ. ಅವರ ತೋಳ್ಬಲ ಮತ್ತು ಶಕ್ತಿಯನ್ನು ಅವರು 5 ವರ್ಷದಲ್ಲಿ ತೋರಿಸಿದ್ದಾರೆ. ಅದನ್ನು ನಾನು ಹೇಳಿದರೆ ಅವರಿಗೆ ನೋವಾಗಬಹುದು. ಅವರ ಕುಟುಂಬದವರು ಅವರನ್ನು ಮನೆಯಿಂದಲೇ ಹೊರಗೆ ಹಾಕಬಹುದು ಎನ್ನುವ ಮೂಲಕ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾಕಿರುವ ಸವಾಲ್‌ಗೆ ಹಾಲಿ ಶಾಸಕ ಅಶೋಕ್ ರೈ ಅವರು ತಿರುಗೇಟು ನೀಡಿದ್ದಾರೆ.
ಮರಳು ಸಮಸ್ಯೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾಲಿ ಶಾಸಕ ಅಶೋಕ್ ರೈ ಅವರಿಗೆ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಜಿತ್ ಮಡಿಕೇರಿ ಅವರನ್ನು ಒಂದು ಗಂಟೆ ಇಲ್ಲಿ ಕರೆಸಿ ಮೆರವಣಿಗೆ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಲಿ. ಅವರ ತೋಳ್ಬಲ ತೋರಿಸಲಿ ಎಂದು ಸವಾಲ್ ಹಾಕಿದ್ದರು. ಅದರ ಮೊದಲು ಜಾಗರಣಾ ವೇದಿಕೆಯ ಸಭೆಯೊಂದರಲ್ಲಿ ಪುತ್ತೂರಿನ ಶಾಸಕ ಅಯೋಗ್ಯ ಎಂದು ಅಜಿತ್ ಮಡಿಕೇರಿ ಹೇಳಿಕೆಗೆ ಶಾಸಕ ಅಶೋಕ್ ರೈ ಯಾರೋ ಮುಠ್ಠಾಳ ಬಂದು ಮಾತನಾಡಿದ್ದಾನೆ. ಆತ ಇನ್ನೂ ಸ್ವಲ್ಪ ಹೊತ್ತು ಪುತ್ತೂರಿನಲ್ಲಿ ಇರಬೇಕಿತ್ತು. ನಾವೇನು ಎಂದು ತೋರಿಸುತ್ತಿದ್ದೆವು ಎಂದು ಪ್ರತಿ ಹೇಳಿಕೆ ನೀಡಿದ್ದರು.
ಮಾಜಿ ಶಾಸಕರ ಬಗ್ಗೆಯಾಗಲೀ, ಬಿಜೆಪಿ ಪಕ್ಷವನ್ನಾಗಲೀ ನಾನು ದೂರುವುದಿಲ್ಲ. ಇಂತಹ ಮಾತುಗಳನ್ನು ಆಡುವ ಅವಶ್ಯಕತೆ ಅವರಿಗೆ ಇರಲಿಲ್ಲ. ನಾನು ಯಾವತ್ತಾದರೂ ಅವರ ಸುದ್ದಿಗೆ ಹೋಗಿದ್ದೇನಾ. ಅವರಿಗೆ ತೋಳ್ಬಲ ಇದೆ ಅದನ್ನು ತೋರಿಸಲಿ. ಅವರು ವೈಟ್‌ಲಿಪ್ಟಿಂಗ್ ನಂತದ್ದೇನೋ ಮಾಡಿದ್ದಾರೆ. ಅದಕ್ಕೆ ಅವರಿಗೆ ಬಿಜೆಪಿ ಸೀಟು ಕೊಟ್ಟಿಲ್ಲ. ಹಾಗಂತ ನನ್ನನ್ನು ಸುಮ್ಮನೆ ಕೆಣಕುವ ಕೆಲಸ ಯಾಕೆ ಮಾಡುತ್ತಾರೆ. ನಮ್ಮನ್ನು ಅವರು ಕೆಣಕಬಾರದು. ನಾವು ಅವರಿಗೆ ಯಾವುದೇ ನೋವುಂಟು ಮಾಡುವುದಿಲ್ಲ. ನಾವು ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಇನ್ನು ೩ ವರ್ಷ ಅಭಿವೃದ್ಧಿ ಮಾಡಲು ಅವಕಾಶ ಕೊಡಿ. ಆಮೇಲೆ ಜನ ಹೇಗೆ ತೀರ್ಮಾನ ಮಾಡುತ್ತಾರೋ ಹಾಗೇ ಆಗುತ್ತದೆ. ಯಾಕೆ ಸುಮ್ಮನೆ ಮಾತನಾಡುವುದು ಸುಮ್ಮನೆ ಇರಿ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳಿ ಎಂದರು.