
ಬಿಜೆಪಿ ನಾಯಕರೇ ಪಕ್ಷಕ್ಕೆ ಬರಲಿದ್ದಾರೆ: ಅಶೋಕ್ ರೈ
ಪುತ್ತೂರು: ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಗೃತಿ ಸಭೆಯ ಬಳಿಕ ಬಿಜೆಪಿ ನಿಜ ಬಣ್ಣಜನತೆಯ ಮುಂದೆ ಬಯಲಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿಯನ್ನು ಮೆಚ್ಚಿ ಕಳೆದ ಮೂರುದಿನಗಳಲ್ಲಿ ಸುಮಾರು 150 ಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರ ಸಹಿತ ನೂರಾರು ಕಾರ್ಯಕರ್ತರು ಕಾಂಗ್ರೇಸಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಸೋಮವಾರ ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿ ಮುಂಡೂರು ಮತ್ತು ಆರ್ಯಾಪು ಗ್ರಾಮದ ೩೦ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.
ಈಗಾಗಲೇ ಪುತ್ತೂರು ಹಾಗೂ ಬಂಟ್ವಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಬಿಜೆಪಿ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಸ್ವ ಇಚ್ಛೆಯಿಂದ ಸೇರುವವರನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತಿದೆ. ಯಾರೂ ಕೂಡಾ ಬೇಡಿಕೆ ಮುಂದಿಟ್ಟು ಕೊಂಡು ಬರುತ್ತಿಲ್ಲ. ಬಿಜೆಪಿ ನಾಯಕರನ್ನು ಸೂಕ್ತ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲಾಗುವುದು. ಯಾರೂ ನಿರೀಕ್ಷೆಯೂ ಮಾಡದ ಕೆಲ ಬಿಜೆಪಿ ಮುಖಂಡರು ನಮ್ಮ ಜತೆಗೆ ಬರಲಿದ್ದಾರೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀದರ್ ರೈ ಮಠಂತಬೆಟ್ಟು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಪಾಣಜೆ ಉಸ್ತುವಾರಿ ಶಂಕರ ನಾರಾಯಣ ಭಟ್, ನೆಟ್ಟಣಿಗೆ ಮುಡ್ನೂರು ಗ್ರಾಪಮ ಸದಸ್ಯ ಶ್ರೀರಾಂ ಪಕ್ಕಳ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ರೈ , ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಆಚಾರ್ಯ, ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುದೇಶ್ ಶೆಟ್ಟಿ ಶಾಂತಿನಗರ, ಸಿದ್ದಿಕ್ ಸುಲ್ತಾನ್ ಕೂಡುರಸ್ತೆ ಉಪಸ್ಥಿತರಿದ್ದರು.