ಅಪ್ರಾಪ್ತ ಬಾಲಕಿಯ ಅಪಹರಣ: ಪ್ರಮುಖ ಆರೋಪಿ ಸಹಿತ ದಂಪತಿ ಬಂಧನ
ಉಳ್ಳಾಲ: ಅಪ್ರಾಪ್ತೆ ಬಾಲಕಿ ಯನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಮತ್ತು ಆತನಿಗೆ ಸಹಕರಿಸಿದ ದಂಪತಿಯನ್ನ ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಹದಿನಾರರ ವಯಸ್ಸಿನ ಅಪ್ರಾಪ್ತ ಮಗಳು ಮನೆಯಿಂದ ಹೊರ ಹೋದವಳು ಹಿಂತಿರುಗದೇ ನಾಪತ್ತೆ ಆಗಿದ್ದು, ಆಕೆಯನ್ನು ಆಮಿಷ ತೋರಿಸಿ ಯಾರೋ ಅಪಹರಿಸಿ ಹೋಗಿರಬೇಕು ಎಂದು ಆರೋಪಿಸಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಮಹಮ್ಮದ್ ಶಹಬಾಝ್ (27) ಹಾಗೂ ಅಪ್ರಾಪ್ತೆಯನ್ನು ಆಕೆಯ ಮನೆಯಿಂದ ಅಪಹರಿಸಲು ಶಹಬಾಝ್‌ಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು ಬಂಧಿಸಿದ್ದಾರೆ.
ಕಳೆದ ಜುಲೈ 5 ರಂದು ಸಂಜೆ 4 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಾಡಿಗೆಯ ಮನೆಯಲ್ಲಿ ನೆಲೆಸಿದ್ದ ಅಪ್ರಾಪ್ತ ಯುವತಿ ಮನೆಯಿಂದ ಹೊರ ಹೋದವಳು ಹಿಂತಿರುಗಿರಲಿಲ್ಲ. ಈ ಬಗ್ಗೆ ಯುವತಿಯ ತಂದೆ ಉಳ್ಳಾಲ ಠಾಣೆಯಲ್ಲಿ ತನ್ನ ಮಗಳನ್ನು ಯಾರೋ ಅಪಹರಿಸಿರುವುದಾಗಿ ದೂರು ನೀಡಿದ್ದರು.
ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿ ಮತ್ತು ಆಕೆಯನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.