
ಬೆಳ್ಮಣ್ ದೇವಳದಲ್ಲಿ ಗೃಹ ಸಚಿವ ಪರಮೇಶ್ವರ್ ದಂಪತಿಗಳಿಂದ ವಿಶೇಷ ಪೂಜೆ: ಮಹಾ ಚಂಡಿಕಾ ಯಾಗ
Tuesday, July 8, 2025
ಶಿರ್ವ: ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ರವರ ಸೇವಾರೂಪದ ‘ಮಹಾ ಚಂಡಿಕಾ ಯಾಗ’ ಹಾಗೂ ಮಹಾಪೂಜೆ ಮಂಗಳವಾರ ಬೆಳ್ಮಣ್ ವನದುರ್ಗೆ ಖ್ಯಾತಿಯ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಶ್ರೀ ದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ವೇ.ಮೂ. ಬಿ. ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಮಹಾ ಚಂಡಿಕಾಯಾಗ, ಅನ್ನ ಸಂತರ್ಪಣೆ ನಡೆಯಿತು.
ಗೃಹ ಸಚಿವ ಜಿ. ಪರಮೇಶ್ವರ್ ಪತ್ನಿ ಜತೆ ಪೂಜೆಯಲ್ಲಿ ಭಾಗವಹಿಸಿದ್ದು ಪೂಜೆಯ ಕಾರಣವನ್ನು ಗೌಪ್ಯವಾಗಿಡಲಾಗಿತ್ತು. ಶತ್ರುಬಾಧೆ ನಿವಾರಣಾರ್ಥ ಈ ಪೂಜೆ ನಡೆಸಲಾಗುತ್ತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು ನನಗ್ಯಾರೂ ಶತ್ರುಗಳಲಿಲ್ಲ...! ಎಲ್ಲರೂ ನನ್ನ ಮಿತ್ರರೇ... ಎಂದರಲ್ಲದೆ ಲೋಕ ಕಲ್ಯಾಣಾರ್ಥವಾಗಿ ಪೂಜೆ ನಡೆಸಲಾಗಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವ ಗುಟ್ಟನ್ನೂ ಸಚಿವರು ಬಿಟ್ಟು ಕೊಡಲಿಲ್ಲ. ಸಚಿವರು ಬೆಳಗ್ಗೆ 7.30ಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದು ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕಾರ್ಕಳದ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೊರತುಪಡಿಸಿ ಹಿರಿಯ ನಾಯಕರ‍್ಯಾರೂ ಇರಲಿಲ್ಲ. ಉಳಿದಂತೆ ಮುಂಬಯಿನ ಉದ್ಯಮಿಗಳಾದ ಕರುಣಾಕರ ಶೆಟ್ಟಿ ಪೆನಿನ್ಸುಲಾ, ಪರ್ವತ್ ಶೆಟ್ಟಿ ಬೋಳ ಮತ್ತಿತರರಿದ್ದರು.
ಬೋಳ ಅವಿನಾಶ್ ಮಲ್ಲಿ, ದೀಪಕ್ ಕೋಟ್ಯಾನ್, ಪ್ರದೀಪ್ ಬೇಲಾಡಿ, ಗೋಪಿನಾಥ ಭಟ್ ಉಪಸ್ಥಿತದ್ದರು. ಬೆಳ್ಮಣ್‌ನಲ್ಲಿ ಪೂಜೆ ಪೂರೈಸಿದ ಬಳಿಕ ಸಚಿವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು.